ಬಳ್ಳಾರಿ : ಕಂದಾಯ ಇಲಾಖೆಯಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೇ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕ ಸಂಘ ಬಳ್ಳಾರಿ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಿಂಗಳ ಮಾಸಿಕ ವೇತನ 12 ಸಾವಿರ ರೂಪಾಯಿಯಲ್ಲಿ ಕುಟುಂಬ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಡಿ ಗ್ರೂಪ್ ದರ್ಜೆ ನೌಕರರೆಂದು ಪರಿಗಣಿಸಿ ಆದೇಶಿಸಿದೆ. ಅಲ್ಲದೇ ಸಚಿವ ಸಂಪುಟದ ಉಪ ಸಮಿತಿಯು ಈ ಹಿಂದೆಯೇ ವರದಿ ಸಲ್ಲಿಸಿದೆ. ಅದರೂ ನಮಗೆ ಯಾವುದೇ ರೀತಿಯ ನ್ಯಾಯ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹಲವಾರು ಜಿಲ್ಲೆಯಲ್ಲಿ ಗ್ರಾಮ ಸಹಾಯಕರ ಮೇಲೆ ಹಲ್ಲೆ ನಡೆಯುತ್ತಿದೆ. ಕೆಲವರು ಕೊರೊನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಗ್ರಾಮ ಸಹಾಯಕರ ಸೇವೆಯನ್ನು ಖಾಯಂಗೊಳಿಸಿ, ಕನಿಷ್ಠ ವೇತನ ನಿಗದಿ, ವೈದ್ಯಕೀಯ ಸೌಲಭ್ಯ, ವಿಮಾ ಸೌಲಭ್ಯ, ಸೂಕ್ತ ಭದ್ರತೆ, ವಿನಾಕಾರಣ ಕೆಲಸದಿಂದ ವಜಾ ಮಾಡಬಾರದೆಂದು ಒತ್ತಾಯಿಸಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಟಿ.ತಿಪ್ಪಣ್ಣ, ದ್ಯಾಮಣ್ಣ, ಟಿ. ಭೀಮಪ್ಪ, ಹೆಚ್.ವೆಂಕಟೇಶ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.