ಬಳ್ಳಾರಿ: ಮಾಸಿಕ 12 ಸಾವಿರ ಗೌರವಧನ ಹಾಗೂ ರಕ್ಷಣಾ ಸಾಮಗ್ರಿ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಸರ್ಕಾರ ಮಾತ್ರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಗೀತಾ, ಕಳೆದ ಮೂರು ತಿಂಗಳಿಂದ ನಿರಂತರವಾಗಿ ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಿದ್ದೇವೆ. ಎರಡು ಮೂರು ದಿನಗಳ ಹಿಂದೆ ವೈದ್ಯಕೀಯ ಸಚಿವ ಡಾ. ಸುಧಾಕರ್ ಅವರು ನಿಮ್ಮ ವೇತನವನ್ನು ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಇದುವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ. ಮಾಸಿಕ 12 ಸಾವಿರ ಗೌರವಧನ ಹಾಗೂ ರಕ್ಷಣಾ ಸಾಮಗ್ರಿ ನೀಡುವಂತೆ ಆಗ್ರಹಿಸಿ 15 ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಸರ್ಕಾರ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬರೀ 6 ಸಾವಿರದಲ್ಲಿ ನಮ್ಮ ಕುಟುಂಬ ನಿರ್ವಹಣೆ ಕಷ್ಟ. ಇನ್ನು, ಕೊರೊನಾ ಕರ್ತವ್ಯದ ವೇಳೆ ಏನಾದ್ರೂ ಅನಾಹುತಗಳು ನಡೆದರೆ ಹೇಗೆ ಎಂದರು.
ನಂತರ ಶಿವಸೇನೆಯ ಜಿಲ್ಲಾಧ್ಯಕ್ಷ ಬಿ. ಈಶ್ವರಪ್ಪ ಮಾತನಾಡಿ, ಮಾಜಿ ಸಚಿವ ಸಂತೋಷ್ ಎಸ್. ಲಾಡ್ ಅವರು ಕಾರ್ಮಿಕರಿಗಾಗಿಯೇ ತಿಂಗಳಿಗೆ 12 ಸಾವಿರ ರೂಪಾಯಿ ವೇತನ ನಿಗದಿ ಮಾಡಿದ್ದರು. ಅದೇ ರೀತಿ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಕಷ್ಟ ಅರ್ಥವಾಗುತ್ತಿಲ್ಲವೆ? ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಅವರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.