ಬಳ್ಳಾರಿ: ತೋಟಗಾರಿಕೆ ಬೆಳೆ ನಷ್ಟದ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಗರಂ ಆದ ಘಟನೆ ನಗರದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಕೋವಿಡ್-19ಗೆ ಸಂಬಂಧಿಸಿದ ಎರಡನೇಯ ಸಭೆಯ ಬಳಿಕ ಸುದ್ದಿಗಾರರನ್ನ ಉದ್ದೇಶಿಸಿ ಮಾತನಾಡುವಾಗ, ತೋಟಗಾರಿಕೆ ಬೆಳೆ ನಷ್ಟದ ಕುರಿತು ಸಚಿವ ಆನಂದಸಿಂಗ್ ಅವರು ಹೇಳುತ್ತಿದ್ದರು. ಆಗ ತೋಟಗಾರಿಕೆ ಬೆಳೆ ನಷ್ಟದ ಅಂದಾಜು ಪಟ್ಟಿ ತಮ್ಮ ಕೈ ಸೇರಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಸಚಿವರು ಇನ್ನೂ ಮಾಹಿತಿ ನೀಡಿಲ್ಲ. ಈಗ ಕೇಳಿರುವೆ ಎಂದರು.
ನಿಮಗೇನೇ ಮಾಹಿತಿ ನೀಡಿಲ್ಲ ಅಂದ್ರೆ ಹೇಗೆ? ಇಷ್ಟು ದಿನ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತ ಏನು ಮಾಡಿದೆ ಎಂಬ ಪ್ರಶ್ನೆಗಳ ಸುರಿಮಳೆ ಪತ್ರಕರ್ತರಿಂದ ತೂರಿ ಬಂದಾಗ ಸಚಿವ ಆನಂದಸಿಂಗ್, ಇವತ್ತು ನೀವು ಅಧಿಕಾರ ವರ್ಗವನ್ನ ಗುರಿಯಾಗಿ ಇಟ್ಕೊಂಡೇ ಇಲ್ಲಿಗೆ ಬಂದಿದ್ದೀರಿ ಅಂತಾ ಕಾಣಿಸುತ್ತೆ. ಅದನ್ನ ನನ್ನ ಮೂಲಕ ಹೇಳಿಸೋಕೆ ಪ್ರಯತ್ನಿಸುತ್ತಿದ್ದೀರಿ. ಇದು ಸರಿಯಾದ ಮಾರ್ಗವಲ್ಲ ಎಂದು ಸಚಿವ ಆನಂದ್ ಸಿಂಗ್ ಗರಂ ಆದರು.
ಡಿಎಂಎಫ್ ಫಂಡ್ ಬಳಕೆಗೆ ಚಿಂತನೆ
ಕೋವಿಡ್-19 ಸಂಬಂಧ ಶಾಸಕರ ಒಮ್ಮತದ ಅಭಿಪ್ರಾಯದೊಂದಿಗೆ ಡಿಎಂಎಫ್ ಫಂಡ್ ಬಳಕೆಗೆ ಚಿಂತನೆ ನಡೆಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವೆಂದು ಹೇಳಲಾಗುತ್ತೆ. ಆ ಆದೇಶ ಪ್ರತಿಯನ್ನ ತೆಗೆಸುತ್ತಿರುವೆ. ಅದನ್ನ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಡೆಂಗ್ಯು ಪ್ರಕರಣಗಳ ನಿಯಂತ್ರಣಕ್ಕೆ ಸೂಚನೆ
ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗಿರುವ ಮಾಹಿತಿಯನ್ನ ಜಿಲ್ಲಾಡಳಿತ ನನ್ನ ಗಮನಕ್ಕೆ ತಂದಿದೆ. ಹೀಗಾಗಿ ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವೆ ಎಂದು ತಿಳಿಸಿದರು.