ಬಳ್ಳಾರಿ/ವಿಜಯನಗರ: ಉಭಯ ಜಿಲ್ಲೆಯಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ವ್ಯಕ್ತಿಯೊಬ್ಬ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಾದ್ಯಂತ ಬೀಸಿದ ಬಿರುಗಾಳಿ ಮಳೆಗೆ ಹತ್ತಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಅಲ್ಲದೇ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.
ಇಂದು ಸಂಜೆ ಬೀಸಿದ ಭಾರಿ ಗಾಳಿ- ಮಳೆಗೆ ತೋರಣಗಲ್ಲು ಬಳಿ ಇರುವ ಜಿಂದಾಲ್ ಕಾರ್ಖಾನೆಯ ಆವರಣದಲ್ಲಿ ಹತ್ತಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿದ್ದು, ಮರದಡಿ ನಿಲ್ಲಿಸಿದ್ದ ಮೂರು ಕಾರುಗಳು ಜಖಂಗೊಂಡಿವೆ. ಅಲ್ಲದೇ ಜಿಂದಾಲ್ ಕಾರ್ಖಾನೆಯ ವ್ಯಾಪ್ತಿಯಲ್ಲಿ ಅತಿಹೆಚ್ಚು ಮರದ ಕೊಂಬೆಗಳು ಮುರಿದು ಬಿದ್ದಿವೆ.
ವಿಜಯನಗರದಲ್ಲಿ ಓರ್ವ ಸಾವು: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪಿಂಜಾರ್ ಇಸ್ಮಾಯಿಲ್ ಸಾಬ್ ಮೃತ ರೈತ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ವೇಳೆ ಮನೆ ಬರುತ್ತಿದ್ದಾಗ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಇಟಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.