ಬೆಳಗಾವಿ: ಮದುವೆ ಆಗುವೆ ಎಂದು ನಂಬಿಸಿ ವಂಚಿಸಿರುವ ಪ್ರಿಯಕರನ ಮನೆ ಮುಂದೆ ಪ್ರಿಯತಮೆ ನ್ಯಾಯಕ್ಕಾಗಿ ಕಳೆದೊಂದು ವಾರಗಳಿಂದ ಪ್ರತಿಭಟನೆ ನಡೆಸಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯುವಕನ ಜೊತೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಸಂತ್ರಸ್ತೆಯದ್ದು.
ವಿವರ:
ಬೈಲಹೊಂಗಲ ಪಟ್ಟಣದ ಯುವತಿಗೆ (ಸಂತ್ರಸ್ತೆ) ಕಳೆದ ನಾಲ್ಕು ವರ್ಷಗಳ ಹಿಂದೆ ಗೋಕಾಕ ತಾಲೂಕಿನ ಅರಭಾವಿ ಗ್ರಾಮದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಕೆಲ ತಿಂಗಳುಗಳ ಕಾಲ ಗಂಡನೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಆ ಮಹಿಳೆಗೆ ಪಕ್ಕದ ಮನೆಯ ಮೌನೇಶ ಬಡಿಗೇರ ಎಂಬಾತನ ಪರಿಚಯವಾಗಿ ಸ್ನೇಹ ಬೆಳೆದಿದೆ. ಈ ಸ್ನೇಹ ದಿನಕಳೆದಂತೆ ಪ್ರೀತಿಗೆ ತಿರುಗಿತು. ಮಹಿಳೆ ಆಕೆಯ ಗಂಡನಿಗೆ ಗೊತ್ತಾಗದಂತೆ ಪ್ರಿಯಕರನೊಂದಿಗೆ ಕಾಲ ಕಳೆದಿದ್ದಾಳೆ.
ಆಕೆಯ ನಡವಳಿಕೆ ಬದಲಾಗುತ್ತಿದ್ದಂತೆ ಗಂಡನಿಗೆ ಅನುಮಾನ ಮೂಡಿದೆ. ಇದಾದ ಕೆಲವೇ ದಿನಗಳಲ್ಲಿ ಇಬ್ಬರ ಪ್ರೀತಿಯ ವಿಷಯ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಬುದ್ಧಿ ಮಾತುಗಳನ್ನು ಹೇಳಿ ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸದಂತೆ ಕುಟುಂಬಸ್ಥರು ಎಚ್ಚರಿಕೆ ಕೊಟ್ಟಿದ್ದರಂತೆ. ಆದ್ರೆ, ಆಕೆ ಮಾತ್ರ ಪ್ರಿಯಕರನಿಗೆ ಮೆಸೇಜ್, ಫೋನ್ ಮಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಈ ವಿಷಯ ಗಂಡನಿಗೆ ಗೊತ್ತಾಗಿ ಡಿವೋರ್ಸ್ ಕೊಟ್ಟಿದ್ದಾನೆ.
ಆ ಸಂದರ್ಭದಲ್ಲಿ ಆಕೆಯ ಪ್ರಿಯತಮ ಮೌನೇಶ ಬಡಿಗೇರ ಕೂಡ ಡಿವೋರ್ಸ್ ಕೊಟ್ಟು ಬಂದ್ರೆ ನಿನ್ನನ್ನು ಮದುವೆ ಆಗುವುದಾಗಿ ಭರವಸೆ ಕೊಟ್ಟಿದ್ದನಂತೆ. ಪ್ರಿಯಕರನ ಭರವಸೆಯ ಮಾತುಗಳನ್ನು ನಂಬಿದ ಯುವತಿ ಡಿವೋರ್ಸ್ ಅರ್ಜಿಗೆ ಸಹಿ ಹಾಕಿ ಬಂದಿದ್ದಾಳೆ.
ಇದಾದ ಬಳಿಕ ಮೌನೇಶ ಮತ್ತು ಆಕೆ ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಮದುವೆ ಆಗಿ ಮನೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮೌನೇಶ ಬಡಿಗೇರ ಕುಟುಂಬಸ್ಥರ ಯುವತಿ ಜಾತಿ ಬೇರೆ ಇದೆ, ಈಗಾಗಲೇ ಒಂದು ಮದುವೆ ಆಗಿರೋ ಹುಡುಗಿಯನ್ನು ನಾವು ಮನೆಗೆ ತುಂಬಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮನೆಯವರ ಮಾತಿನಂತೆ ಮೌನೇಶ ಮಹಿಳೆಗೆ ಕೈಕೊಟ್ಟು ಕೆಲ ದಿನಗಳ ಕಾಲ ನಾಪತ್ತೆ ಆಗಿ ಇದೀಗ ವಾಪಸ್ ತನ್ನ ಮನೆಗೆ ಬಂದಿದ್ದಾನೆ.
ಇದೀಗ ಅರಭಾವಿಯಲ್ಲಿರುವ ಮೌನೇಶನ ಮನೆಯ ಮುಂದೆ ನ್ಯಾಯ ಕೊಡುವಂತೆ ಮಹಿಳೆ ಅಂಗಲಾಚಿದ್ದಾಳೆ. ಮನೆಯ ಮುಂದೆ ಧರಣಿ ಕುಳಿತಿದ್ದ ಮಹಿಳೆಗೆ ಮೌನೇಶನ ತಾಯಿ ಹಾಗೂ ಅವರ ಸಂಬಂಧಿಕರು ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಸ್ವತಃ ಸಂತ್ರಸ್ತೆ ಆರೋಪಿಸಿದ್ದಾರೆ. ಇನ್ನು ಜೀವ ಬೆದರಿಕೆ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ನ್ಯಾಯ ಕೊಡಿಸುವ ಬದಲು ಆತನ ಮನೆಯ ಮುಂದೆ ಕುಳಿತುಕೊಳ್ಳಬೇಡ ಎಂದು ಸಂಬಂಧಿಸಿದ ಪೊಲೀಸರು ತನಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ನಿಂದ ವರ್ಚುವಲ್ ಮೂಲಕವೇ ಬಿಜೆಪಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ!
ಸದ್ಯ ನ್ಯಾಯ ಒದಗಿಸಬೇಕಿದ್ದ ಪೊಲೀಸರೇ ಆರೋಪಿಯ ಪರವಾಗಿ ಯುವತಿಗೆ ಬೆದರಿಕೆ ಹಾಕಿದ್ದಲ್ಲದೇ ಆಕೆಯನ್ನು ಬಲವಂತವಾಗಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ ಎಂಬ ಆರೋಪವೂ ಪೊಲೀಸರ ಮೇಲಿದೆ. ಯುವತಿಯನ್ನು ಗೋಕಾಕ್ ತಾಲೂಕಿನ ಹಿಡಕಲ್ ಡ್ಯಾಮ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.