ಬೆಳಗಾವಿ : ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಸೇರಿ 15ಕ್ಕೂ ಹೆಚ್ಚು ಹೋರಾಟಗಾರರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದುಕೊಂಡರು.
ಡಿ. 31ರಂದು ಕರ್ನಾಟಕ ಬಂದ್ ಹಿನ್ನೆಲೆ, ಬಂದ್ಗೆ ಬೆಂಬಲಿಸುವಂತೆ ಕೋರಲು ವಾಟಾಳ್ ನಾಗರಾಜ್ ಬೆಳಗಾವಿಗೆ ಬಂದಿದ್ದರು. ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಅವರು, ರಾಷ್ಟ್ರಕವಿ ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಇಂದು ಕುವೆಂಪು ಅವರ ಜನ್ಮ ದಿನೋತ್ಸವ ಹಿನ್ನೆಲೆ ಬೆಂಬಲಿಗರ ಜೊತೆ ಸೇರಿ ವಾಟಾಳ್ ನಾಗರಾಜ್ ಕುವೆಂಪು ಅವರ ಭಾವಚಿತ್ರಕ್ಕೆ ನಮಿಸಿದರು. ಕುವೆಂಪು ಪರ ಘೋಷಣೆ ಕೂಗಿದರು.
ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲಿ ಬಂದ್ ಸಾಕಷ್ಟು ಜನರಿಗೆ ನಷ್ಟವಾಗಲಿದೆ : ಬಂದ್ ಮುಂದೂಡುವಂತೆ ಕರವೇ ಮನವಿ
ನಂತರ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದರು. ಆಗ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಹೋರಾಟಗಾರರು ಎಂಇಎಸ್ ವಿರುದ್ಧ ಘೋಷಣೆ ಕೂಗಿದರು. ಎಂಇಎಸ್ ವಿರುದ್ಧ ಉಗ್ರ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿದರು. 15ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.