ಅಥಣಿ: ಇಬ್ಬರು ಗರ್ಭಿಣಿಯರನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಕರೆದುಕೊಂಡು ಬರುವಾಗ, ಇಬ್ಬರಿಗೂ ಏಕಕಾಲದಲ್ಲಿ ಒಂದೇ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗಿರುವ ಘಟನೆ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ತಡರಾತ್ರಿ ಬಾಳಿಗೇರಿ ಗ್ರಾಮದ ರಾಜಶ್ರೀ ಕುರುಬರ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ 108ಕ್ಕೆ ಕರೆ ಮಾಡಿದ್ದಾರೆ. ಇದೇ ಸಂದರ್ಭ ತಾಲೂಕಿನ ಮಲಾಬಾದ್ ಗ್ರಾಮದ ರುಕ್ಸಾನಾ ಕಣಬರ್ ಎಂಬ ಗರ್ಭಿಣಿಗೂ ಕೂಡ ಹೆರಿಗೆ ನೋವು ಕಾಣಿಸಿದ್ದರಿಂದ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಈ ಹಿನ್ನೆಲೆ ಒಂದೇ ಮಾರ್ಗವಾಗಿ ಬಂದ ವಾಹನ ಇಬ್ಬರನ್ನು ಕರೆದುಕೊಂಡು ಬರುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಇಬ್ಬರು ಗರ್ಭಿಣಿಯರಿಗೆ ಏಕಕಾಲದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದೆ. ರಾಜಶ್ರೀ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ, ರುಕ್ಸಾನಾ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಒಂದೇ ವಾರದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗುತ್ತಿರುವ 3ನೇ ಪ್ರಕರಣ ಇದಾಗಿದೆ.
ಶುಶ್ರೂಷಕ ಮಹೇಂದ್ರ ಬಾಳ ಕೋಟಗಿ ಹಾಗೂ 108 ಪೈಲಟ್, ಸಿಬ್ಬಂದಿ ಸಂಜೀವ್ ಕಬ್ಬುರ ಅವರೇ ಮಾನವೀಯತೆ ಮೆರೆದು ಹೆರಿಗೆಗೆ ನೆರವಾಗಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.