ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ವಿದೇಶದಿಂದ ಆಗಮಿಸಿದ 95 ಜನರ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ, ಜನ ಭಯ ಪಡಬೇಕಿಲ್ಲ. ವಿದೇಶದಿಂದ ಬಂದವರನ್ನು ಅವರ ಮನೆಯಲ್ಲಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ. ಅಲ್ಲದೇ ನಿತ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನೆರೆ ರಾಜ್ಯ ಮಹಾರಾಷ್ಟ್ರ, ಗೋವಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಗಡಿ ಭಾಗದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ರೈಲು ನಿಲ್ದಾಣದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಸವದತ್ತಿ ಯಲ್ಲಮ್ಮ, ಮಾಯಕ್ಕ ದೇವಸ್ಥಾನ, ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಹೊರ ರಾಜ್ಯಗಳಿಗೆ ಸಾರಿಗೆ ಬಸ್ ಪ್ರಮಾಣ ತಗ್ಗಿಸಲಾಗಿದ್ದು, ಪ್ರಯಾಣಿಕರಿಗೆ ಅನಾನೂಕುಲ ಆಗದಂತೆ ಸೇವೆ ಒದಗಿಸಲಾಗುತ್ತಿದೆ ಎಂದರು.