ಚಿಕ್ಕೋಡಿ: ಹಗಲಿರುಳು ದುಡಿಯುವ ವ್ಯಕ್ತಿಯೊಬ್ಬನಿಗೆ 16 ವರ್ಷಗಳಿಂದ ಹಸಿವೇ ಆಗಿಲ್ಲವಂತೆ. ಅದು ನಂಬಲಸಾಧ್ಯ. ಆದರೆ, ಅದೇ ನಿಜ. ದಿನದ ಮೂರು ಹೊತ್ತು ಊಟದ ಬದಲಿಗೆ ಕೇವಲ ಟೀ ಮತ್ತು ನೀರು ಸೇವಿಸಿಕೊಂಡೇ ಬದುಕಿದ್ದಾನೆ! ಚಹಾ ಮತ್ತು ನೀರು ಹೊರತುಪಡಿಸಿ ಬೇರೆ ಏನನ್ನೂ ಸೇವಿಸದ ಆ ವಿಚಿತ್ರ ವ್ಯಕ್ತಿ ಯಾರು? ಮುಂದೆ ಓದಿ...
ಈತನ ಹೆಸರು ಶ್ರೀಶೈಲ ಬೆಳಕೂಡ. ಈತನಿಗೆ 36 ವರ್ಷ. ಬೆಳಗಾವಿಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಯುವಕ.
ಮನೆ ಜವಾಬ್ದಾರಿಯನ್ನು ಹೊತ್ತಿರುವ ಶ್ರೀಶೈಲ ಹಗಲು ರಾತ್ರಿ ಎನ್ನದೆ ಹೊಲದಲ್ಲಿ ದುಡಿಮೆ ಮಾಡುತ್ತಾನೆ. ಆಯಾಸ ಎಂಬುವುದೇ ಇಲ್ಲ. ಒಂದು ನಿಮಿಷವೂ ಖಾಲಿ ಕೂರುವುದಿಲ್ಲ. ಈತ ಮಾಡುವ ಕೆಲಸಕ್ಕೆ ಭರ್ಜರಿಯಾಗಿ ಊಟ ಸೇವಿಸಬೇಕು. ಆದರೆ, ಶ್ರೀಶೈಲ ಊಟ ಮಾಡುವುದನ್ನು ಬಿಟ್ಟು ಸುಮಾರು 16 ವರ್ಷಗಳೇ ಕಳೆದಿದೆ. ಇದೊಂದು ರೀತಿ ಪವಾಡ ಎನ್ನುತ್ತಾರೆ ಜತೆಗಿರುವ ಸಹೋದರರು.
ತನ್ನ 20ನೇ ವಯಸ್ಸಿನಲ್ಲಿ ಊಟ ಮಾಡುವುದನ್ನು ತಿರಸ್ಕರಿಸಿದ. ಶ್ರೀಶೈಲನಿಗೆ ಮಹಾರಾಷ್ಟ್ರದ ಸಾಂಗಲಿ, ಮೀರಜ್, ಕೊಲ್ಹಾಪುರ, ಸೇರಿದಂತೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಏನೇ ಮಾಡಿಸಿದರೂ ಆತನಿಗೆ ಮಾತ್ರ ಹಸಿವು ಆಗುತ್ತಿಲ್ಲವಂತೆ.
16 ವರ್ಷಗಳಿಂದ ಮೂರು ಹೊತ್ತಿನ ಊಟದ ಬದಲಿಗೆ ಟೀ ಕುಡಿಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಶ್ರೀಶೈಲನಿಗೆ ಈವರೆಗೂ ಯಾವುದೇ ಅಡ್ಡಪರಿಣಾಮಗಳಾಗಿಲ್ಲ. ಬರೀ ಟೀ ಸೇವಿಸಿಕೊಂಡೇ ಗಟ್ಟಿಮುಟ್ಟಾಗಿದ್ದಾರೆ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಬದಲಾಗದನ್ನು ಕುಟುಂಬ ಸದಸ್ಯರು ಆತನಿಗೆ ಚಿಕಿತ್ಸೆ ನಿಲ್ಲಿಸಿದ್ದಾರೆ. ನಾನೂ ಸಹ ಆರಾಮಾಗಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ ಶ್ರೀಶೈಲ.