ಬೆಳಗಾವಿ: ಅಂಕೋಲ ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧ ಇಲ್ಲಿನ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ನ್ಯಾಯಾಲಯದಲ್ಲಿ ಕೆ.ಅಣ್ಣಾಮಲೈ ಸಾಕ್ಷ್ಯ ನುಡಿದರು.
ಆರ್.ಎನ್. ನಾಯಕ ಕೊಲೆ ಪ್ರಕರಣದಲ್ಲಿ ಈ ಹಿಂದೆ ಕೆ. ಅಣ್ಣಾಮಲೈ ತನಿಖಾಧಿಕಾರಿ ಆಗಿದ್ದರು. ಪ್ರಸ್ತುತ ಕೆ. ಅಣ್ಣಾಮಲೈ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ನಿನ್ನೆ ಬೆಳಗ್ಗೆ ಬೆಳಗಾವಿಗೆ ಆಗಮಿಸಿದ್ದ ಅಣ್ಣಾಮಲೈ ಎರಡು ದಿನಗಳ ಕಾಲ ಇಲ್ಲಿನ ಕೋಕಾ ನ್ಯಾಯಾಲಯಕ್ಕೆ ಹಾಜರಾಗಿ ಬನ್ನಂಜೆ ವಿರುದ್ಧ ಸಾಕ್ಷ್ಯ ನುಡಿದರು.
ಅಣ್ಣಾಮಲೈ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿ ಪ್ರತಾಪ್ ರೆಡ್ಡಿ, ಭಾಸ್ಕರ್ ರಾವ್ ಕೂಡ ಕೋರ್ಟಿಗೆ ಹಾಜರಾಗಿ ಸಾಕ್ಷ್ಯ ನುಡಿದರು. ಆರ್.ಎನ್. ನಾಯಕ ಕೊಲೆ ಪ್ರಕರಣದಡಿ ಬನ್ನಂಜೆ ರಾಜಾ ಸೇರಿ 15 ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಾಗಿತ್ತು.
ಇದನ್ನೂ ಓದಿರಿ: PM Kisan Yojana: ಜನವರಿ 1ರಂದು ರೈತರ ಖಾತೆಗೆ ಪಿಎಂ ಕಿಸಾನ್ 10ನೇ ಕಂತಿನ ಹಣ
ಪ್ರಕರಣ ಸಂಬಂಧ ವಿದೇಶದಲ್ಲಿದ್ದ ಬನ್ನಂಜೆ ರಾಜಾನನ್ನು 2016 ಆಗಸ್ಟ್ ತಿಂಗಳಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಇಲ್ಲಿನ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ. ಇದು ರಾಜ್ಯದ ಮೊದಲನೇ ಕೊಕಾ ಪ್ರಕರಣವಾಗಿದೆ.