ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಶಂಕೆ ಹಿನ್ನೆಲೆ ಆರು ಜನರ ಗಂಟಲು ದ್ರವದ ಮಾದರಿಯನ್ನ ಪರೀಕ್ಷೆಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮೂಲದ ದಂಪತಿ ಹಾಗೂ ಮಗು ವಿದೇಶದಿಂದ ಆಗಮಿಸಿದ್ದರು. ಈ ಪೈಕಿ ನಾಲ್ಕೂವರೆ ವರ್ಷದ ಮಗುವಿಗೆ ಕೊರೊನಾ ಶಂಕೆ ಇದೆ. ಮಗುವಿನ ಗಂಟಲು ದ್ರವದ ಮಾದರಿಯನ್ನ ಪರೀಕ್ಷೆಗೆ ರವಾನೆ ಮಾಡಲಾಗಿದೆ. ದಂಪತಿ ಹಾಗೂ ಪುತ್ರಿ ಸದ್ಯ ಹೋಮ್ ಐಸೊಲೇಷನ್ನಲ್ಲಿದ್ದಾರೆ. ಗಂಟಲಿನ ದ್ರವದ ಮಾದರಿಯನ್ನ ಶಿವಮೊಗ್ಗ ಹಾಗೂ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ನಾಳೆ ವರದಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜಿಲ್ಲೆಗೆ ವಿದೇಶಗಳಿಂದ ಬಂದ 229 ಜನರ ಮೇಲೆ ನಿಗಾ ಇಡಲಾಗಿದೆ. 192 ಜನರಿಗೆ 14 ದಿನಗಳ ಹೋಮ್ ಐಸೊಲೇಷನ್ ಇರುವಂತೆ ಸೂಚಿಸಲಾಗಿದೆ. ಇಬ್ಬರು ಶಂಕಿತರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯ ಐಸೊಲೇಟೆಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ ಮೂವರ 28 ದಿನಗಳ ಹೋಮ್ ಐಸೊಲೇಷನ್ ಕಂಪ್ಲೀಟ್ ಆಗಿದೆ ಎಂದರು.