ಬೆಳಗಾವಿ : ಸಚಿವ ಕೆ.ಎಸ್. ಈಶ್ವರಪ್ಪ ರಾಕ್ಷಸ ಪ್ರವೃತ್ತಿ ಮನುಷ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಹೇಳಿದ್ದು ಸತ್ಯ. ಈಶ್ವರಪ್ಪ ಹೇಳದೇ ಯಾರೂ ಕೆಲಸ ಮಾಡಲು ಆಗಲ್ಲ.
ಸಚಿವರ ಮೌಖಿಕ ಸೂಚನೆ ಮೇರೆಗೆ ಗುತ್ತಿಗೆದಾರ ಕೆಲಸ ಮಾಡಿದ್ದಾರೆ. ಸಾಲ ಮಾಡಿ ಸಂತೋಷ್ ಪಾಟೀಲ್ ಕೆಲಸ ಮಾಡಿಸಿದ್ದಾನೆ. ಪತ್ನಿಯ ಒಡವೆಯನ್ನು ಅಡವಿಟ್ಟು ಕೆಲಸ ಮಾಡಿದ್ದಾರೆ. ಸಚಿವ ಈಶ್ವರಪ್ಪ ಜೊತೆಗೆ ಆತನ ಪಿಎಗಳು ಸಹ ಕಮೀಷನ್ ಕೇಳಿದ್ದಾರೆ. ಶೇ.40ರಷ್ಟು ಕಮೀಷನ್ ವಸೂಲಿ ಮಾಡೋ ಇವರು ರಾಕ್ಷಸರೋ, ಮನುಷ್ಯರೋ? ಎಂದು ಪ್ರಶ್ನಿಸಿದರು.
ಈಶ್ವರಪ್ಪ ಅಲ್ಲದೇ ಎಲ್ಲ ಇಲಾಖೆಯಲ್ಲಿ ಕಮೀಷನ್ ಆರೋಪ ಕೇಳಿ ಬರುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ. ನಾವು ಇದರ ಚರ್ಚೆಗೆ ವಿಧಾನಸಭೆಯಲ್ಲಿ ಅವಕಾಶ ಕೇಳಿದ್ದೆವು. ನಮಗೆ ಅವಕಾಶ ನೀಡದೇ ನಮ್ಮ ಮನವಿ ತಿರಸ್ಕರಿಸಲಾಯಿತು. ಬೆತ್ತಲೆ ಆಗುತ್ತೇವೆ ಎನ್ನುವ ಭಯ ಬಿಜೆಪಿ ಸರ್ಕಾರಕ್ಕೆ ಇತ್ತು ಎಂದರು.
ಇದನ್ನೂ ಓದಿ: ವಿವಾದಗಳಿಗೂ ಈಶ್ವರಪ್ಪಗೂ ಬಿಡಿಸಲಾರದ ನಂಟು! ಕೊರಳಿಗೆ ಉರುಳಾಗುವುದೇ 'ಕಮಿಷನ್'?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇವೆ. ಕುಟುಂಬಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದರು. ಇನ್ನೂ ಸಾವಿನ ಮನೆಯಲ್ಲಿ ನಾವ್ಯಾರು ರಾಜಕೀಯ ಮಾಡುತ್ತಿಲ್ಲ. ವಾಸ್ತವ ಮರೆಮಾಚಲು ಬಿಜೆಪಿ ನಾಯಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.