ಬೆಳಗಾವಿ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಬೆಳಗಾವಿಯಲ್ಲಿ ಎಂಇಎಸ್ ಮುಖಂಡರ ಜೊತೆಗೆ ರಹಸ್ಯ ಸಭೆ ನಡೆಸಿದ್ದಾರೆ. ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಶರದ್ ಪವಾರ್ ಸಭೆ ನಡೆಸಿ, ಮರಾಠಾ ಮತಗಳ ಓಲೈಕೆಗೆ ಮುಂದಾಗಿದ್ದಾರೆ.
ಚಿತ್ರೀಕರಣ ಮಾಡಲು ಹೋದ ಮಾಧ್ಯಮಗಳಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ. ಮಾಧ್ಯಮಗಳ ಕ್ಯಾಮರಾ ಬಂದ್ ಮಾಡಿಸಿ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಎರಡು ದಿನಗಳ ಬೆಳಗಾವಿ ಪ್ರವಾಸದಲ್ಲಿದ್ದ ಪವಾರ್ ಗಡಿ ವಿವಾದದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಬೆಳಗಾವಿ ಪ್ರವಾಸ ಮುಗಿಸಿ ವಾಪಸ್ ಆಗುವಾಗ ಎಂಇಎಸ್ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಗಡಿ ವಿವಾದ ವಿಚಾರಣೆಗೆ ಬಂದಿಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಲು ನಾಡದ್ರೋಹಿ ಎಂಇಎಸ್ ಮುಖಂಡರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಸಚಿವ ಜಯಂತ್ ಪಾಟೀಲ್‌ರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಹಾಗೂ ಗಡಿಭಾಗದ ಮರಾಠಿ ಶೈಕ್ಷಣಿಕ ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರ ಅನುದಾನ ನೀಡಬೇಕು ಎಂದು ಎಂಇಎಸ್ ಮುಖಂಡರು ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ವಿಕಾಸ್ ಆಘಾಡಿ ನಿಮ್ಮ ಬೆಂಬಲಕ್ಕೆ ಸದಾ ಇದೆ ಎಂದ ಶರದ್ ಪವಾರ್ ಅಭಯ ನೀಡಿದರು. ಆದರೆ ಯುವಕರು ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡುತ್ತಿರುವುದಕ್ಕೆ ಸಭೆಯಲ್ಲಿ ಪವಾರ್ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ಕಹಿಯಾಗುತ್ತಾ ಸಕ್ಕರೆ?