ಬೆಳಗಾವಿ: ಕಳೆದೊಂದು ವಾರದಿಂದ ಕುಂದಾನಗರಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಖಾನಾಪುರ ತಾಲೂಕಿನ ಗುರ್ಲಗಂಜಿ ಗ್ರಾಮದ ಶಾಲಾ ಕೊಠಡಿಯೊಂದು ಕುಸಿದು ಬಿದ್ದಿದೆ. ಇನ್ನೊಂದೆಡೆ, ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಯೂ ತೇವಗೊಂಡು ಕುಸಿತವಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ.
ಖಾನಾಪೂರ ತಾಲೂಕಿನಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಶಾಲಾ ಗೋಡೆಗಳು ಮಳೆ ಅಬ್ಬರಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಅಳಿವಿನಂಚಿಗಿರುವ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮುಂದಾಗುವ ಅನಾಹುತ ತಪ್ಪಿಸುವ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಧರೆಗುರುಳಿದ 20ಕ್ಕೂ ಹೆಚ್ಚು ಮನೆಗಳು: ಕಿತ್ತೂರು ತಾಲೂಕಿನಾದ್ಯಂತ ಮಳೆಗೆ 20 ಮನೆಗಳಿಗೆ ಹಾನಿ ಆಗಿದೆ. ಪ್ರಮುಖವಾಗಿ ಕಿತ್ತೂರು ತಾಲೂಕಿನ ಕತ್ರಿದಡ್ಡಿ, ದಿಂಡಲಕೊಪ್ಪ, ಗಲಗಿನಮಡಾ, ನಿಚ್ಚಣಕಿ, ದೇಗಾಂವ ಹಾಗೂ ಚಿಕ್ಕನಂದಿಹಳ್ಳಿ, ತಿಗಡೊಳ್ಳಿ, ಬೈಲೂರು ಗ್ರಾಮಗಳಲ್ಲಿನ ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.
ನದಿಪಾತ್ರದ ಗ್ರಾಮದ ಜನರಿಗೆ ಸೂಚನೆ: ಕೃಷ್ಣಾ ನದಿಗೆ 80 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹಿಪ್ಪರಗಿ ಬ್ಯಾರೇಜ್ನಿಂದ ಹೊರಬಿಡಲಾಗುತ್ತಿದೆ. ಘಟಪ್ರಭಾ ನದಿಗೆ 28 ಸಾವಿರಕ್ಕೂ ಅಧಿಕ, ಮಲಪ್ರಭಾ ನದಿಗೆ 6 ಸಾವಿರಕ್ಕೂ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿಪ್ಪಾಣಿ, ಚಿಕ್ಕೋಡಿ ತಾಲೂಕಿನ 6 ಕೆಳಹಂತದ ಸೇತುವೆಗಳು ನೀರಿನಲ್ಲಿ ಮುಳುಗಿವೆ. ಹೀಗಾಗಿ ನದಿಪಾತ್ರದ ಗ್ರಾಮದ ಜನರಿಗೆ ಎಚ್ಚರದಿಂದಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಇದನ್ನೂ ಓದಿ: ಮುಂದಿನ 48 ಗಂಟೆ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್: ಹವಾಮಾನ ಇಲಾಖೆ