ಬೆಳಗಾವಿ: ನಾಡದ್ರೋಹಿ ಎಂಇಎಸ್, ಶಿವಸೇನೆಯನ್ನು ನಿಷೇಧ ಮಾಡುವ ಮಸೂದೆಯನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವ ಶಾಸಕನಿಗೆ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಒಂದು ಕೋಟಿ ರೂ. ಬಹುಮಾನ ನೀಡುವುದಾಗಿ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಘೋಷಿಸಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಎಂಇಎಸ್, ಶಿವಸೇನೆ ನಿಷೇಧ ಕಾಯ್ದೆ ಮಂಡಿಸುವ ಶಾಸಕರಿಗೆ ಕರ್ನಾಟಕ ನವನಿರ್ಮಾಣ ಸೇನೆಯಿಂದ ಒಂದು ಕೋಟಿ ಹಣ ನೀಡುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಿದರು. ಇದರ ಜೊತೆಗೆ ಎಂಇಎಸ್ ನಿಷೇಧ ಕಾಯ್ದೆ ಜಾರಿ ತರಬೇಕಾಗಿತ್ತು ಎಂದು ಹೇಳಿದ್ದಾರೆ.
'ಜೈಲಿಗೆ ಹಾಕಿದ್ರೆ ಬಗ್ಗೋದಿಲ್ಲ'
ಯಾವ ಪಕ್ಷದ ಶಾಸಕರು ಎಂಇಎಸ್, ಶಿವಸೇನೆ ನಿಷೇಧ ಕಾಯ್ದೆ ಮಂಡಿಸುವರೋ ಅವರಿಗೆ ಒಂದು ಕೋಟಿ ಹಣ ಬಹುಮಾನವಾಗಿ ನೀಡುತ್ತೇವೆ. ಆ ಶಾಸಕರನ್ನು ಕನ್ನಡದ ಭೀಷ್ಮ ಅಂತಾ ಗೌರವಿಸುತ್ತೇವೆ. ಕನ್ನಡ ಸ್ವಾಭಿಮಾನ ಎತ್ತಿಹಿಡಿದ ಗೆಳೆಯರ ಮೇಲೆ ಕೊಲೆ ಯತ್ನ ಕೇಸ್ ಹಾಕಿದ್ದಾರೆ. ಇದು ಆರು ಕೋಟಿ ಕನ್ನಡಿಗರು ತಲೆ ತಗ್ಗಿಸುವಂತಹ ಕೆಲಸ. ತಕ್ಷಣ ಕೊಲೆಯತ್ನ ಕೇಸ್ ಹಿಂಪಡೆಯಲು ಗೃಹಸಚಿವರಿಗೆ ಮನವಿ ಮಾಡುತ್ತೇವೆ. ಜೈಲಿಗೆ ಹಾಕಿದಕ್ಕೆ ಬಗ್ಗೋದಿಲ್ಲ, ಕುಗ್ಗೋದಿಲ್ಲ ಎಂದರು.
ಜೈಲಿಗೆ ಹೋಗಿ ಬಂದ ಗೆಳೆಯರಿಗೆ ಆರು ಕೋಟಿ ಕನ್ನಡಿಗರ ಪರ ಸ್ವಾಗತಿಸಲಾಗಿದೆ. ಕರವೇ ನಾರಾಯಣಗೌಡ ಬಣ ಆದಿಯಾಗಿ ಎಲ್ಲರೂ ನಮ್ಮನ್ನು ಬೆಂಬಲಿಸಿದ್ದಾರೆ. ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ರಣಹೇಡಿ ಎಂಇಎಸ್ ಪುಂಡರಿಗೆ ಸಂಪತ್‌ಕುಮಾರ್ ದೇಸಾಯಿ ಸೇರಿ ನಾಲ್ವರು ಮಸಿ ಬಳಿದು ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇವತ್ತು ಅವರು ಬಿಡುಗಡೆ ಆಗಿರುವುದು ಸಂತೋಷದ ಸಂಗತಿ. ಮಹಾಜನ್ ವರದಿ ಬಂದು 70 ವರ್ಷ, ಏಕೀಕರಣ ಕರ್ನಾಟಕ ರಚನೆ ಆಗಿ 65 ವರ್ಷ ಕಳೆದಿದೆ. ಇವತ್ತಿಗೂ ಜನಪ್ರತಿನಿಧಿಗಳಿಗೆ ಬೆಳಗಾವಿ ನೆಲ ಬಗ್ಗೆ ಸ್ವಾಭಿಮಾನ ಬರದೇ ಇರೋದು ನಾಚಿಗೇಡಿನ ಸಂಗತಿ ಎಂದು ಭೀಮಾಶಂಕರ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿಗಳ ವಿರುದ್ಧವೇ ಹೋರಾಟ..!
ಸರ್ಕಾರ ಮಾಡಬೇಕಾದ ಕೆಲಸ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಾಡಿದ್ದಾರೆ. ಯಾವುದೇ ಸರ್ಕಾರ ಕೂಡ ಎಂಇಎಸ್ ವಿರುದ್ಧ ಗಂಡಸ್ತನ ಪ್ರದರ್ಶನ ಮಾಡಿಲ್ಲ. ಬೆಳಗಾವಿ ಕನ್ನಡಿಗರದ್ದು ಅಲ್ವಾ ಎಂದು ಮನೆಹಾಳು ರಾಜಕಾರಣಿಗಳಿಗೆ ಪ್ರಶ್ನೆ ಕೇಳಬೇಕಿದೆ. ಬೆಳಗಾವಿಯಲ್ಲಿ 11 ಅಧಿವೇಶನ ಮಾಡಿದ್ರು ಗಡಿ ವಿಚಾರ ಚರ್ಚೆ ಮಾಡಿಲ್ಲ. ಇತ್ತಿಚೆಗೆ ಬಂದ ಶಾಸಕರಿಗೆ ಮಹಾಜನ್ ವರದಿ ಬಗ್ಗೆ ಗೊತ್ತಿಲ್ಲ. ಅಧಿವೇಶನ ಸಂದರ್ಭದಲ್ಲಿ ಎಂಇಎಸ್ ಪುಂಡರಿಗೆ ಬೆಳಗಾವಿ ರಾಜಕಾರಣಿಗಳೇ ಪ್ರೋತ್ಸಾಹ ಮಾಡುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ಎಂಇಎಸ್, ಶಿವಸೇನೆ ನಿಷೇಧ ಮಾಡಬೇಕು. ಇಲ್ಲವಾದ್ರೆ ಎಂಇಎಸ್ ಅಲ್ಲ ನಮ್ಮ ರಾಜಕಾರಣಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರ ಮೇಲೆ ಒತ್ತಡ ಹಾಕಿ ನಮ್ಮ ಹೋರಾಟಗಾರ ಮೇಲೆ 307 ಕೊಲೆ ಯತ್ನ ಕೇಸ್ ಹಾಕಲಾಗಿದೆ. ಕೊಲೆಗಡುಕ ಕೆಲಸ ಮಾಡದಿದ್ದರೂ ಹೀಗೆ ಕೇಸ್ ಹಾಕಿದ ಹೀನಕೃತ್ಯ ಕರ್ನಾಟಕದಲ್ಲಿ ನಡೆದಿದೆ. ತಕ್ಷಣವೇ ಸರ್ಕಾರ ಕೊಲೆ ಯತ್ನದ ಕೇಸ್ ವಾಪಸ್ ಪಡೆಯಬೇಕು. ಕೊಲೆ ಯತ್ನ ಕೇಸ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಘಟನೆ ನಡೆದ ಸಂಪೂರ್ಣ ವಿಡಿಯೋ ಚಿತ್ರೀಕರಣ ನಮ್ಮ ಬಳಿಯಲ್ಲೇ ಇವೆ. ಇದನ್ನ ಮುಂದಿಟ್ಟುಕೊಂಡು ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಇದನ್ನೂ ಓದಿ: 'ನಿಮಗೆ ತಾಕತ್ತಿದ್ರೆ ನಿಷೇಧಿಸಿ..': ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿ ಮತ್ತೆ ಎಂಇಎಸ್ ಪುಂಡಾಟ