ಬೆಳಗಾವಿ: ಬೆಂಗಳೂರು ಗಲಭೆ ಪ್ರಕರಣದಲ್ಲಿ ಸಮಾಜಘಾತುಕ ಶಕ್ತಿಗಳ ಕೈವಾಡವಿದ್ದು, ಸಮಾಜಕ್ಕೆ ಕಂಟಕ ತರುವ ಶಕ್ತಿಗಳನ್ನು ಸದೆಬಡಿಯಲು ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಹಮಾರಾ ದೇಶ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ನಾಗರಿಕ ಸಮಾಜದ ನೆಮ್ಮದಿಯನ್ನು ಕಸಿದುಕೊಂಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ಉದ್ದೇಶಪೂರ್ವಕವಾಗಿಯೇ ಈ ಕೃತ್ಯವನ್ನು ಎಸಗಿದ್ದಾರೆಂದು ಆರೋಪಿಸಿದರು.
ಗಲಭೆ ಸೃಷ್ಟಿಸಿದ ಆರೋಪಿಗಳ ವಿರುದ್ಧ ಸರ್ಕಾರ ದಿಟ್ಟ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು. ದುಷ್ಟ ಶಕ್ತಿಗಳನ್ನು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಸದೆಬಡಿಯಬೇಕು. ನಾಗರಿಕರ ರಕ್ಷಣೆಗೆ ಮೊದಲು ಆದ್ಯತೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.