ಚಿಕ್ಕೋಡಿ : ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನನ್ನು ಬಿಟ್ಟು ಬೇರೆ ಯಾರಿಗಾದರೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದರೆ ನನ್ನ ಸಹೋದರನನ್ನ ನಾನು ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸುತ್ತಿರಲಿಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಸ್ತವನಿದಿ ಗ್ರಾಮದಲ್ಲಿ ಸಹೋದರ ಲಖನ್ ಪರ ರಮೇಶ ಜಾರಕಿಹೊಳಿ ಬಹಿರಂಗ ಪ್ರಚಾರ ನಡೆಸಿದರು. ಈ ವೇಳೆ ಲಖನ್ ಹೊರಗಿಟ್ಟು ರಮೇಶ್ ಜಾರಕಿಹೊಳಿ ಸಭೆಯಲ್ಲಿ ಭಾಗಿಯಾಗಿದ್ದರು. ಭಾಷಣ ಮುಗಿಸಿ ರಮೇಶ್ ಹೊರ ನಡೆಯುತ್ತಿದ್ದಂತೆ, ವೇದಿಕೆಗೆ ಆಗಮಿಸಿದ ಲಖನ್ ಜಾರಕಿಹೊಳಿ ಪ್ರಚಾರ ಸಭೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹಾಗೂ ಸಹೋದರ ಲಖನ್ ಜಾರಕಿಹೊಳಿ ಪರವಾಗಿ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದೇನೆ.
ಮೊದಲ ಪ್ರಾಶಸ್ತ್ಯದ ಮತ ಯಾರ ಪರವಾಗಿ ಹಾಕಬೇಕು ಎಂಬುದನ್ನು ಶೀಘ್ರದಲ್ಲೇ ಹೇಳುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದಲೇ ನನ್ನ ಸಹೋದರನನ್ನ ಚುನಾವಣೆಗೆ ನಿಲ್ಲಿಸಿದ್ದೇವೆ.
ಪ್ರಕಾಶ್ ಹುಕ್ಕೇರಿ ಅಥವಾ ವಿವೇಕರಾವ್ ಪಾಟೀಲ್ಗೆ ಕಾಂಗ್ರೆಸ್ ಟಿಕೇಟ್ ನೀಡಿದ್ದರೆ, ನನ್ನ ಸಹೋದರ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಬೀಳುವಲ್ಲಿ ಕಾರಣವಾದ ಡಿ ಕೆ ಶಿವಕುಮಾರ್ ವಿರೋಧಕ್ಕಾಗಿ ನನ್ನ ಸಹೋದರ ಇಂದು ಬಂಡಾಯವಾಗಿ ನಿಂತಿದ್ದಾನೆ.
ಎಲ್ಲಾ ಪಕ್ಷದ ಚುನಾಯಿತ ಪ್ರತಿನಿಧಿಗಳು ಇಲ್ಲಿಗೆ ಬಂದಿದ್ದೀರಿ, ಲಖನ್ ಹಾಗೂ ಮಹಾಂತೇಶ ಕವಟಗಿಮಠ ಇಬ್ಬರಿಗೂ ಆಶೀರ್ವಾದ ಮಾಡಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.