ಬೆಳಗಾವಿ: ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿಗಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಮತ್ತೆ ಮುಂಬೈಗೆ ತೆರಳಲಿದ್ದಾರೆ. ರಮೇಶ್ ಜಾರಕಿಹೊಳಿ ಈ ನಡೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಅವರು ಮುಂಬೈಗೆ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ. ನಾಳೆ ಬೆಳಗ್ಗೆ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿ, ಸಿಡಿ ಜಾಲದಿಂದ ಪಾರಾಗುವ ಸಂಬಂಧ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಲ್ಲಿ ದೇವೇಂದ್ರ ಫಡ್ನವಿಸ್ ಪ್ರಮುಖ ಪಾತ್ರ ವಹಿಸಿದ್ದರು.
ಹೀಗಾಗಿ, ಫಢ್ನವಿಸ್‌ರನ್ನು ರಮೇಶ ಜಾರಕಿಹೊಳಿ ರಾಜಕೀಯ ಗಾಡ್‌ಫಾದರ್ ಎಂದು ನಂಬುತ್ತಾರೆ. ಸ್ವಪಕ್ಷಿಯರೇ ಸಿಡಿ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಹಾಗೂ ರಾಜ್ಯ ಸರ್ಕಾರದ ಅಸಹಕಾರ ತೋರುತ್ತಿದೆ ಎಂಬುವುದು ರಮೇಶ್ ಆರೋಪ. ತಮ್ಮ ಏಳ್ಗೆ ಸಹಿಸದೇ ಷಡ್ಯಂತ್ರ ಮಾಡಿದ್ದಾರೆಂದು ಕೆಲ ಬಿಜೆಪಿ ಪ್ರಮುಖ ನಾಯಕರ ವಿರುದ್ಧ ಫಡ್ನವಿಸ್ಗೆ ರಮೇಶ್ ದೂರು ನೀಡಿದ್ದಾರೆ. ರಮೇಶ್ ದೂರನ್ನು ಫಡ್ನವಿಸ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಹೈಕಮಾಂಡ್ ಸಂದೇಶವನ್ನು ಫಡ್ನವಿಸ್ ನಾಳೆ ರಮೇಶ್ ಜಾರಕಿಹೊಳಿಗೆ ತಿಳಿಸುವ ಸಾಧ್ಯತೆ ಇದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮುಂಬೈನಲ್ಲಿ ನಿರ್ಧರಿಸುವುದಾಗಿ ರಮೇಶ್ ಎರಡ್ಮೂರು ದಿನಗಳ ಹಿಂದೆಯೇ ಹೇಳಿಕೆ ನೀಡಿದ್ದಾರೆ. ಹೀಗಾಗಿ, ರಮೇಶ್ ಮುಂಬೈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ನಾಳೆ ದೇವೇಂದ್ರ ಫಡ್ನವಿಸ್ ಭೇಟಿ ಬಳಿಕ ದೆಹಲಿಗೆ ತೆರಳಿ, ಕೆಲ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಅಲೆ ಅಡಗಿಸಲು ಮೂಲ ಕಾಂಗ್ರೆಸಿಗರ ಹೊಸ ತಂತ್ರ: "ದಲಿತ ಸಿಎಂ ಅಲೆ"