ಚಿಕ್ಕೋಡಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ್ ನಗರಸಭೆ ಕಾರ್ಯಾಲಯದಲ್ಲಿ ತೆರೆಯಲಾಗಿರುವ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ಶಾಸಕ. ಹೀಗಾಗಿ, ಬಿಜೆಪಿ ಪಕ್ಷದ ಅಭ್ಯರ್ಥಿ ಮೊದಲ ಪ್ರಾಸಸ್ತ್ಯದ ಮತದಲ್ಲೇ ಗೆಲ್ಲಬೇಕು. ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಕೆಲಸ ಮಾಡಲಾಗಿದೆ. ಹೀಗಾಗಿ, ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಪರಿಷತ್ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ದುಡ್ಡು ಒಂದು ಭಾಗ. ಆದ್ರೆ, ಬರೀ ದುಡ್ಡಿನ ಮೇಲೆ ರಾಜಕಾರಣ ಮಾಡ್ತೇವೆ ಅಂದ್ರೆ ಅದೊಂದು ಮೂರ್ಖತನ. ರಾಜಕಾರಣಕ್ಕೆ ದುಡ್ಡು ಬೇಕು. ಆದ್ರೆ, ದುಡ್ಡೇ ಎಲ್ಲ ಅಲ್ಲ. ರಾಜಕಾರಣಿಗಳು ಮಾಡುವ ಕಾರ್ಯಗಳ ಮೇಲೆ ಜನರು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಗುಜನಾಳ ಗ್ರಾಮದಲ್ಲಿ ಮೊಕ್ಕಾಂ ಹೂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸತೀಶ್ ಜಾರಕಿಹೊಳಿ ನಡೆಯನ್ನು ಸ್ವಾಗತಿಸುತ್ತೇನೆ. ಕಾನೂನಿನಲ್ಲಿ ಅವಕಾಶ ಸಿಕ್ರೆ ಹಿಲ್ ಗಾರ್ಡನ್ನಲ್ಲಿ (ಸತೀಶ ಜಾರಕಿಹೊಳಿ ಮನೆಯಲ್ಲಿ) ಚುನಾವಣೆ ಮಾಡಿಸೋಣ ಎಂದು ಟಾಂಗ್ ನೀಡಿದರು.
ಚುನಾವಣೆ ಸಂಬಂಧ ಸತೀಶ್ ಜಾರಕಿಹೊಳಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ನಾವು ಮತದಾರರ ಮೇಲೆ ಪ್ರಭಾವ ಬೀರುವ ಅವಶ್ಯಕತೆ ಇಲ್ಲ ಎಂದರು. ಕೆಲವು ಕ್ಷೇತ್ರದಲ್ಲಿ ಜಾತಿ ರಾಜಕಾರಣ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನ್ನ ಕಿವಿಗೆ ಬಿದ್ದಿಲ್ಲ. ಸತೀಶ್ ಜಾರಕಿಹೊಳಿ ಹತಾಶೆಯಿಂದ ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ಗೆ ನಿಲ್ಲಲು ನೆಲೆ ಇಲ್ಲ. ಇಡೀ ದೇಶದಲ್ಲಿ ಪಂಜಾಬ್ ಮತ್ತು ಕರ್ನಾಟಕದಲ್ಲಿ ಉಸಿರಾಡುತ್ತಿದೆ. ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಕಾರಣಕ್ಕೆ ಸತೀಶ್ ಜಾರಕಿಹೊಳಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಬಿಜೆಪಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ : ಸಚಿವ ಪ್ರಲ್ಹಾದ್ ಜೋಶಿ