ಬೆಳಗಾವಿ: ಜನರು ಮಲಗಿರುವ ವೇಳೆ ಸರ್ಕಾರ ನೈಟ್ ಕರ್ಫ್ಯೂ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ಸಾರ್ವಜನಿಕರ ಹಿತಾಸಕ್ತಿ ಅಡಗಿಲ್ಲ ಎಂದು ವ್ಯಾಪಾರಿ ರಾಘವೇಂದ್ರ ಎಂಬುವರು ಸರ್ಕಾರದ ನಿರ್ಣಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ರಾಜ್ಯ ಸರ್ಕಾರ ಕೊರೊನಾ ತಡೆಗೆ ತಂದಿರುವ ನೈಟ್ ಕರ್ಫ್ಯೂ ಸಮಯವನ್ನು ಸಂಜೆ 6 ರಿಂದ ಬೆಳಗ್ಗೆ 6 ರ ವರೆಗೆ ವಿಸ್ತರಿಸಬೇಕಿತ್ತು. ಹೀಗೆ ಮಾಡುವುದರಿಂದ ಸರ್ಕಾರಿ ನೌಕರರು ಸೇರಿದಂತೆ ಎಲ್ಲರೂ ಒಂದು ಗಂಟೆಗೂ ಹೆಚ್ಚು ಅವಧಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮನೆ ಸೇರುತ್ತಿದ್ದರು. ಇದೀಗ ಸರ್ಕಾರ 11 ರಿಂದ 5 ರ ವರೆಗೆ ತಂದಿರುವ ನೈಟ್ ಕರ್ಫ್ಯೂ ಅವಧಿಯಲ್ಲಿ ಜನರೆಲ್ಲರೂ ಮಲಗಿರುತ್ತಾರೆ ಎಂದರು.
ಜನರು ರಾತ್ರಿ ವೇಳೆ ಹೆಚ್ಚು ಓಡಾಡುವುದಿಲ್ಲ. ಸರ್ಕಾರ ಕೊರೊನಾ ತಡೆಗೆ ಕರ್ಫ್ಯೂ ಘೋಷಣೆ ಮಾಡಿದೆ ಎಂದು ತೊರಿಸಿಕೊಳ್ಳಲು ಮಾತ್ರ ನೈಟ್ ಕರ್ಫ್ಯೂ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಯಾರಿಗೂ ಲಾಭವಿಲ್ಲ. ಕೊರೊನಾ ವೈರಸ್ ತಡೆಯಲು ಜನ ದಟ್ಟಣೆ ಕಡಿಮೆ ಮಾಡಬೇಕು. ಆದ್ರೆ ಸರ್ಕಾರ ಈ ಕೆಲಸವನ್ನು ಮಾಡುತ್ತಿಲ್ಲ. ಸಾರ್ವಜನಿಕರ ಹಿತಾಸಕ್ತಿ ಇದರಲ್ಲಿ ಅಡಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ನೈಟ್ ಕರ್ಫ್ಯೂವಿನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಎಂದಿನಂತೆ ನಮ್ಮ ಕೆಲಸ ಮಾಡಿಕೊಂಡು ಮನೆಗೆ ತೆರಳುತ್ತೇವೆ ಎಂದು ಆಟೋ ಚಾಲಕರು ಸಹ ಪ್ರತಿಕ್ರಿಯೆ ನೀಡಿದ್ದಾರೆ.