ಬೆಳಗಾವಿ: ಕೊರೊನಾ ತುರ್ತು ಪರಿಸ್ಥಿತಿಯಲ್ಲಿಯೂ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಯಿಂದ ಜನಸಾಮಾನ್ಯರು ತೀವ್ರ ಪರದಾಡುವಂತಾಗಿದ್ದು, ತಕ್ಷಣವೇ ರಾಜ್ಯ ಸರ್ಕಾರ ಇಂತಹ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಾನವ ಹಕ್ಕುಗಳ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ಕೊರೊನಾ ಸಂಕಷ್ಟದ ನಡುವೆ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ಅವ್ಯವಸ್ಥೆಗಳಿದ್ದರೆ, ಖಾಸಗಿ ಆಸ್ಪತ್ರೆಯ ಹಗಲು ದರೋಡೆ ನಡೆಸುತ್ತಿವೆ. ಇದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಖಾಸಗಿ ಆಸ್ಪತ್ರೆಗೆ ಭಾರಿ ಪ್ರಮಾಣದಲ್ಲಿ ದುಡ್ಡು ಸುರಿಯಬೇಕಿದೆ. ಇಲ್ಲವೇ, ಜಿಲ್ಲಾಸ್ಪತ್ರೆಗೆ ದಾಖಲಾದರೆ ಆ ರೋಗಿ ಪಡೆಯುವ ಕಷ್ಟ ಅಷ್ಟಿಷ್ಟಲ್ಲ. ಬುಧವಾರ ಮಧ್ಯರಾತ್ರಿ ಜಿಲ್ಲಾಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹಸುಗೂಸೊಂದು ಸಾವನ್ನಪ್ಪಿದೆ. ಇತ್ತೀಚೆಗೆ ಓರ್ವ ಮಹಿಳೆ ಬಿಪಿ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸಿಗದೇ ನರಳಿ ಸಾವನ್ನಪ್ಪಿದ್ದರು. ಹೀಗಾಗಿ ರಾಜ್ಯ ಸರ್ಕಾರ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇನ್ನು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಯವರು ಹಗಲು ದರೋಡೆ ಮಾಡುತ್ತಿದ್ದಾರೆ. ಇಷ್ಟೆಲ್ಲ ಅವ್ಯವಸ್ಥೆಗೆ ಜಿಲ್ಲಾಡಳಿತವೇ ಕಾರಣ ಎಂದು ಆರೋಪಿಸಿದ್ದಾರೆ.