ಬೆಳಗಾವಿ: ಸಮಸ್ಯೆ ಉಲ್ಭಣವಾದ ಸಮಯದಲ್ಲಿ ಬಾರದ ಸಚಿವರು ಈಗ ಬತ್ತಿ ಒಣಗಿ ಹೋಗಿರುವ ನದಿ ನೋಡಲು ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ, ಸಚಿವ ಡಿಕೆಶಿ ಕಾಲೆಳೆದರು.
ನಗರದ ಗಾಂಧಿ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಿನ ಅಭಾವದಿಂದ ಕೃಷ್ಣಾ ನದಿ ಪಾತ್ರದ ಜನ-ಜಾನುವಾರುಗಳ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟ ಸಮಯದಲ್ಲಿ ಬಾರದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಈಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಒಣಗಿದ ನದಿ ನೋಡಲು ಸಚಿವರು ಬರುತ್ತಿದ್ದಾರೆಯೇ ಹೊರತು ನಮ್ಮ ರೈತರ ಸಮಸ್ಯೆ ಆಲಿಸಲು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಕ್ಷೇತ್ರದಿಂದ ಸಂಸದರ ಪೈಕಿ ಕೇಂದ್ರದಲ್ಲಿ ಸಚಿವರಾದವರು ತೀರಾ ವಿರಳ. ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಬಲವಂತರಾವ್ ದಾತಾರ, ನಂತರ ಬಾಬಾಗೌಡ ಪಾಟೀಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಇದೀಗ ಸುರೇಶ್ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು, ಈ ಕ್ಷೇತ್ರದಿಂದ ಮಂತ್ರಿ ಆದ ಮೂರನೇ ಸಂಸದ ಇವರಾಗಿದ್ದಾರೆ. ಅದೂ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸುರೇಶ್ ಅಂಗಡಿ ಮಂತ್ರಿ ಆಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸ ಆಗುವ ನಿರೀಕ್ಷೆ ಇದೆ. ಈ ಹಿಂದೆ ರಾಜ್ಯದ ಹಲವರು ರೈಲ್ವೆ ಮಂತ್ರಿ ಆಗಿದ್ದರು. ಆದರೆ ಯಾವ ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನ ಆಗಲಿಲ್ಲ. ಆದರೆ ಇದೀಗ ಮೋದಿ ಸರ್ಕಾರ ಮತ್ತೊಮ್ಮೆ ಬಂದಿದ್ದು, ಸುರೇಶ್ ಅಂಗಡಿಯೂ ರೈಲ್ವೆ ಮಂತ್ರಿ ಆಗಿರುವುದು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ಅವರಿಂದ ಬರಲಿ ಎಂದು ಆಶಿಸುತ್ತೇನೆ ಎಂದರು.