ಬೆಳಗಾವಿ: ಜಿಲ್ಲೆ ಸೇರಿದಂತೆ ನಗರ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿನ ಪ್ರಕರಣಗಳನ್ನು ಬೇಧಿಸಲು ಪೊಲೀಸರಿಗೆ ನೆರವಾಗಿದ್ದ ನಯನಾ ಇನ್ನಿಲ್ಲ. ಅಗಲಿದ ಆ ಚಾಣಾಕ್ಷೆ, ಧೀರೆಗೆ ಪೊಲೀಸರು ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸೆಲ್ಯೂಟ್ ಹೊಡೆದರು.
ಹೌದು, ಈ ನಯನಾ ಖಡಕ್ ಪೊಲೀಸ್ ಅಧಿಕಾರಿಯಲ್ಲ. ಸಿನಿಮಾ ಶೈಲಿಯಲ್ಲಿ ಹೇಳುವುದಾದರೆ ‘ಅದಕ್ಕೂ ಮೇಲೆ’. ಪೊಲೀಸರಿಗೆ ಕಗ್ಗಂಟಾಗಿದ್ದ ಹಲವು ಪ್ರಕರಣಗಳನ್ನು ಪೊಲೀಸ್ ಶ್ವಾನ ನಯನಾ ತನ್ನ ಬುದ್ಧಿವಂತಿಕೆಯಿಂದ ಭೇದಿಸಿದ್ದಳು. ಪೊಲೀಸ್ ಇಲಾಖೆಯ ಶ್ವಾನದಳದ ಅಚ್ಚುಮೆಚ್ಚಿನವಳಾಗಿದ್ದ ಇವಳು ಶನಿವಾರ ಹೃದಯಾಘಾತದಿಂದ ಎಲ್ಲರನ್ನೂ ಬಿಟ್ಟು ಅಗಲಿದ್ದಾಳೆ.
ಜಿಲ್ಲೆಯಲ್ಲಿ 8 ವರ್ಷಗಳ ಕಾಲ ಪೊಲೀಸರಿಗೆ ಸ್ನೇಹಿಯಾಗಿ ಕೆಲಸ ನಿರ್ವಹಿಸಿದ್ದ ಈ ಶ್ವಾನ, ನಾಲ್ಕು ವರ್ಷ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಿಂದಿನ ನಗರ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಅವರ ಅವಧಿಯಲ್ಲಿ ನಯನಾಗೆ ವಯಸ್ಸಾದ ಹಿನ್ನೆಲೆ ನಿವೃತ್ತಿ ಘೋಷಿಸಿದ್ದರು.
ಆದ್ರೆ, ನಯನಾಳನ್ನು ಡಾಗ್ ಸ್ಕ್ವಾಡ್ ಸಿಬ್ಬಂದಿಗೆ ಸಾಕಲು ಪೊಲೀಸ್ ಇಲಾಖೆ ಅನುಮತಿ ನೀಡದೇ, ಪೊಲೀಸ್ ಆಯುಕ್ತರ ನಿವಾಸದಲ್ಲೇ ಸ್ವಂತ ಖರ್ಚಿನಲ್ಲಿ ಸುಂದರವಾದ ಪುಟ್ಟಗೂಡನ್ನು ಕಟ್ಟಿ ಆರೈಸಿದ್ದರು. ಅಷ್ಟೇ ಅಲ್ಲದೆ ಲೋಕೇಶ್ ಕುಮಾರ್ ಸಹ ಅದನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಯಂತೆ ನೋಡಿಕೊಂಡಿದ್ದರು. ಎಲ್ಲರ ಅಚ್ಚು ಮೆಚ್ಚಿನ ನಯನಾಳ ಸಾವು ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಗೆ ತುಂಬಲಾರದ ನೋವುಂಟುಮಾಡಿದೆ. ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್ ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.
ಒಟ್ಟಿನಲ್ಲಿ ಅಪರಾಧ ವಿಭಾಗದ ಪೊಲೀಸ್ ಇಲಾಖೆಗೆ ಹೆಗಲು ಕೊಟ್ಟ ಸಹಕಾರಿಯಾಗಿದ್ದ ಪ್ರೀತಿಯ ನಯನಾ ಸಾವನ್ನಪ್ಪಿರುವುದು ಬೇಸರದ ಸಂಗತಿ.