ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ಕಾಗವಾಡ ಅವಳಿ ತಾಲೂಕುಗಳಲ್ಲಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟ ಪರಿಣಾಮ ಅಪಘಾತಗಳು ಸಾಮಾನ್ಯವಾಗಿವೆ. ವಿಜಯಪುರ ಸಂಕೇಶ್ವರ್ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿದ್ದನ್ನು ಸ್ಥಳೀಯರು ನೋಡಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಥಣಿ ಕಾಗವಾಡ ತಾಲೂಕಿನಲ್ಲಿ ಸರಿಯಾಗಿ ರಸ್ತೆ ಇಲ್ಲದೇ ಅಪಘಾತ ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿರುದ್ಧವೂ ಕಿಡಿಕಾರಿದ್ದಾರೆ. ನಿತ್ಯ ಅಪಘಾತದಿಂದ ರೈತರು, ವಾಹನ ಸವಾರರಿಗೆ ತೊಂದರೆ ಎದುರಾಗಿದೆ. ರಸ್ತೆ ಸರಿ ಮಾಡಿ, ಇಲ್ಲವಾದರೆ ಮನೆಯಲ್ಲಿ ಇದ್ದು ಬಿಡಿ ಎಂದು ಆಗ್ರಹಿಸಿದ್ದಾರೆ.
ಸಂಕೇಶ್ವರ ವಿಜಯಪುರ ರಾಜ್ಯ ಹೆದ್ದಾರಿ ಹಲವಾರು ವರ್ಷಗಳಿಂದ ಹದಗೆಟ್ಟು ವಾಹನ ಸವಾರರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಅಪಘಾತಗಳು ಕೂಡಾ ಸಾಮಾನ್ಯವಾಗಿವೆ. ಕೆಲವು ದಿನಗಳ ಹಿಂದೆ ರಸ್ತೆ ಮರು ಡಾಂಬರೀಕರಣಕ್ಕೆ ಅಧಿಕಾರಿಗಳು ಚಾಲನೆ ನೀಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅದು ಕಿತ್ತು ಹೋಗಿದ್ದು, ಕಳಪೆ ಮಟ್ಟದ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸದ್ಯ ಚಿಕ್ಕೋಡಿ ಉಪವಿಭಾಗದಲ್ಲಿ ಕಬ್ಬು ಕಟಾವು ಪ್ರಾರಂಭವಾಗಿದ್ದು, ಸಹಜವಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಇದರಿಂದಾಗಿ ಸುಗಮ ಸಂಚಾರ ಇಲ್ಲದೇ ಅಪಘಾತ ಸಂಭವಿಸುತ್ತಿವೆ ಎನ್ನಲಾಗ್ತಿದೆ.
ಇದನ್ನೂ ಓದಿ: ಸಿಪಿಐ ಲಂಚ ಪಡೆಯುತ್ತಿದ್ದ ವಿಡಿಯೋ ವೈರಲ್: ಶಿಸ್ತು ಕ್ರಮಕ್ಕೆ ಶಾಸಕ ಈಶ್ವರ ಖಂಡ್ರೆ ಆಗ್ರಹ