ಬೆಳಗಾವಿ: ಎರಡು ದಿನಗಳ ಹಿಂದೆ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧನೋರ್ವ ರಾಮದುರ್ಗ ತಾಲೂಕಿನ ದೊಡಮಂಗಡಿ ಗ್ರಾಮದ ಹೊರ ವಲಯದಲ್ಲಿರುವ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದೊಡಮಂಗಡಿ ಗ್ರಾಮದ ಹನುಮಂತಪ್ಪ (82) ಮೃತ ವೃದ್ಧ. ಮಲಪ್ರಭಾ ನದಿಗೆ ನವಿಲುತೀರ್ಥ ಡ್ಯಾಂನಿಂದ ಏಕಾಏಕಿ ನೀರು ಬಿಟ್ಟಿದ್ದಕ್ಕೆ ವೃದ್ಧ ಕೊಚ್ಚಿಕೊಂಡು ಹೋಗಿದ್ದರು. ಕಳೆದೆರಡು ದಿನಗಳಿಂದ ನೀರಿನ ಹರಿವು ಕಡಿಮೆ ಆಗಿದ್ದಕ್ಕೆ ಇಂದು ಮೃತದೇಹ ಪತ್ತೆಯಾಗಿದೆ.
ಈ ಕುರಿತು ಸ್ಥಳಕ್ಕೆ ತಹಶಿಲ್ದಾರ್ ಬಸನಗೌಡ ಕೊಟ್ಟೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆಯಷ್ಟೇ ಗೋಕಾಕಿನ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಇನ್ನು ಖಾನಾಪುರ ಹಾಗೂ ಗೋಕಾಕಿನಲ್ಲಿ ಕೊಚ್ಚಿಹೋಗಿರುವ ಇನ್ನೂ ಇಬ್ಬರಿಗೆ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.