ಬೆಂಗಳೂರು: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ನಾಳೆ ಇಡೀ ದಿನ ಸಮಯ ಕೊಟ್ಟು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದ್ದಾರೆ.
ಉತ್ತರ ಕರ್ನಾಟಕದ ವಿಷಯಗಳ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗದ ವಿಷಯ ವಿಧಾನ ಪರಿಷತ್ ಕಲಾಪದಲ್ಲಿಂದು ಪ್ರತಿಧ್ವನಿಸಿತು. ಸುವರ್ಣ ಸೌಧದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ನಡೆಸದಿದ್ದರೆ ಬೆಂಗಳೂರಿಗೆ ವಾಪಸ್ ಹೋಗಿ, ಜನ ನಾವೆಲ್ಲಾ ಪಿಕ್ನಿಕ್‌ಗೆ ಬಂದಿದ್ದೇವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದರು.
ಸದಸ್ಯರ ಒತ್ತಾಯಕ್ಕೆ ಮಣಿದ ಸಭಾಪತಿಗಳು ನಾಳೆ ಪ್ರಶ್ನೋತ್ತರ ಕಲಾಪದ ನಂತರ ಇಡೀ ದಿನ ಉತ್ತರ ಕರ್ನಾಟಕ ಭಾಗದ ವಿಷಯದ ಚರ್ಚೆಗೆ ಅವಕಾಶ ನೀಡುವುದಾಗಿ ರೂಲಿಂಗ್ ನೀಡಿದರು. ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್, ಉತ್ತರ ಕರ್ನಾಟಕದ ಜನ ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮೂರು ವರ್ಷದ ನಂತರ ಇಲ್ಲಿ ಅಧಿವೇಶನ ನಡೆಯುತ್ತಿದೆ, ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆಯಾಗಬೇಕು ಎನ್ನುವ ನಿರೀಕ್ಷೆ ಇದೆ ಎಂದರು.
ಈ ಭಾಗದ ಅನೇಕ ಜಲಸಂಪನ್ಮೂಲ ಯೋಜನೆಗಳು ನೆನೆಗುದಿಗೆಗೆ ಬಿದ್ದಿವೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ ಚರ್ಚೆಗೆ ಅವಕಾಶ ನೀಡಬೇಕು ಹಾಗೂ ಎಂಇಎಸ್ ಉದ್ಧಟತನದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಶಿವಾಜಿ ಪ್ರತಿಮೆಗೆ ಮಸಿ ಬಳಿಯಲಾಗಿದೆ ಈ ಕುರಿತು ಚರ್ಚೆಗೆ ಸಮಯ ನಿಗದಿಪಡಿಸಬೇಕು. ಪ್ರತಿಮೆಯ ಭಗ್ನ, ಮಸಿ ಬಳಿಯುವುದು ಒಳ್ಳೆಯದಲ್ಲ. ಎಂಇಎಸ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರು ಯಾರೇ ಆಗಲಿ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ಸರ್ಕಾರ ವೈಫಲ್ಯವಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದರು.
'ಉತ್ತರ ಕರ್ನಾಟಕ ಚರ್ಚೆ ಆರಂಭಿಸಿ ಇಲ್ಲ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿ'
ನಂತರ ಮಾತನಾಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಿ ಒಂದು ವಾರ ಆಯಿತು. ಉತ್ತರ ಕರ್ನಾಟಕದ ಆಗು ಹೋಗುಗಳ ಬಗ್ಗೆ ಒಂದು ವಿಚಾರವೂ ಬರಲಿಲ್ಲ, ಬೆಂಗಳೂರಿನಿಂದ ಅಧಿಕಾರಿಗಳು, ಶಾಸಕರು, ಸಚಿವರು ಪಿಕ್ನಿಕ್‌ಗೆ ಬಂದಿದ್ದಾರೆ. ವಾರಾಂತ್ಯ ಗೋವಾಗೆ ಹೋಗೋಕೆ ಇವರು ಬಂದಿರೋದು ಮಜಾ ಮಾಡಲು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಮಗೆ ಮುಜುಗರವಾಗುತ್ತಿದೆ, ಇದು ದುರ್ದೈವದ ಸಂಗತಿ. ಇಂದಿನಿಂದ ಉತ್ತರ ಕರ್ನಾಟಕ ಚರ್ಚೆ ಆರಂಭಿಸಿ, ಇಲ್ಲವೇ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿ ಬೆಂಗಳೂರಿಗೆ ವಾಪಸ್ ಹೋಗಿ. ಕೋಟಿಗಟ್ಟಲೆ ಹಣ ವ್ಯಯ ಮಾಡಿ ಸದನ ನಡೆಸಿ ಇಲ್ಲಿನ ವಿಚಾರಗಳಚೇ ಚರ್ಚೆ ಆಗದಿದ್ದರೆ ಇಲ್ಲಿ ಕಲಾಪ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸುವರ್ಣ ಸೌಧದಲ್ಲಿ ಯಾವುದೋ ವ್ಯಕ್ತಿಯ ವಿಷಯ ಇರಿಸಿಕೊಂಡು ಚರ್ಚಿಸಿದರೆ ಹೇಗೆ? ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಇಲ್ಲದಿರುವುದು ನಾವೆಲ್ಲಾ ತಲೆ ತಗ್ಗಿಸಬೇಕಾದ ವಿಷಯ. ಭೂ ಕಬಳಿಕೆ, ನೀರು, ಮಣ್ಣು ಕಬಳಿಕೆ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ವಿಶೇಷ ಅಧಿವೇಶನ ಕರೆಯಿರಿ, ನಾವೆಲ್ಲಾ ಪಾಪಿಗಳು ನಿಮ್ಮೊಂದಿಗೆ ನಾವು ದನಿಗೂಡಿಸುತ್ತಿದ್ದೇವೆ. ನಮ್ಮ ದನಿಗೆ ನೀವು ದನಿಗೂಡಿಸಿ ಎಂದು ಮನವಿ ಮಾಡಿದರು. ಇಲ್ಲಿ ಬೆಳೆಹಾನಿಯಾಗಿದೆ, ರೈತರು ಸಂಕಷ್ಟದಲ್ಲಿದ್ದಾರೆ, ಧರಣಿ ಬಿಟ್ಟು ಕಲಾಪ ನಡೆಸಿ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಸಿ ನಂತರ ಮತ್ತೆ ಧರಣಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಉತ್ತರ ಕರ್ನಾಟಕ ಜನತೆಯ ನಿರೀಕ್ಷೆಗೆ ತಕ್ಕಂತೆ ನಾವು ಚರ್ಚಿಸಿಲ್ಲ, ನಾಳೆಯೇ ಕೃಷ್ಣಾ ಮೇಲ್ದಂಡೆ ಯೋಜನೆ ಬಿ ಸ್ಕೀಂ ಕುರಿತು ಚರ್ಚೆಗೆ ಅವಕಾಶ ನೀಡಬೇಕು. ಎಂಇಎಸ್ ಪುಂಡಾಟ ವಿಚಾರದಲ್ಲಿ ಕನ್ನಡಿಗರ ವಿರುದ್ಧ ಕೊಲೆ ಕೇಸ್ ಹಾಕುತ್ತಿದ್ದು, ಬೇರೆಯವರ ವಿರುದ್ಧ ಸಾಮಾನ್ಯ ಕೇಸ್ ದಾಖಲಾಗುತ್ತಿದೆ. ಇದು ಸರಿಯಲ್ಲ, ನಮ್ಮ ಸರ್ಕಾರಿ ವಾಹನಗಳ ಮೇಲೆ ದಾಳಿ ನಡೆಸಲಾಗಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದರು.
'ಚರ್ಚೆಗೆ ಸಿದ್ಧವಿದ್ದೇವೆ, ಕಾತರವಾಗಿದ್ದೇವೆ'
ಪ್ರತಿಪಕ್ಷಗಳ ಬೇಡಿಕೆ ಕುರಿತು ಮಾತನಾಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ಸದಸ್ಯರ ಬೇಡಿಕೆ ಗೊತ್ತಿದೆ, ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಇಲ್ಲಿ ಅಧಿವೇಶನ ನಡೆಯುತ್ತಿದೆ. ನಾವೆಲ್ಲಾ ಸಚಿವರು ಇಲ್ಲಿದ್ದೇವೆ, ಚರ್ಚೆಗೆ ಸಿದ್ಧವಿದ್ದೇವೆ, ಕಾತರವಾಗಿದ್ದೇವೆ. ಸಮಯ ನಿಗದಿಪಡಿಸಿ ನಾವು ಸಿದ್ಧರಿದ್ದೇವೆ ಎಂದರು.
ಎಂಇಎಸ್ ಪುಂಡಾಟ ನಡೆಸಿ ರಾಷ್ಟ್ರೀಯ ನಾಯಕತ್ವಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದೆ. ಸರ್ಕಾರ ಈ ದುಂಡಾವರ್ತನೆ ಸಹಿಸಲ್ಲ, ಈಗಾಗಲೇ ಇವರೆಲ್ಲರಿಗೂ ಲಾಠಿ ರುಚಿ ತೋರಿಸಿದ್ದೇವೆ, ಕಾನೂನು ಸುವ್ಯವಸ್ಥೆಗೆ ಸವಾಲು ಹಾಕಿರುವವರನ್ನು ಮಟ್ಟ ಹಾಕಲಿದ್ದೇವೆ, ಚರ್ಚೆಗೆ ಸಿದ್ಧವಿದ್ದೇವೆ, ಉತ್ತರ ಕೊಡಲಿದ್ದೇವೆ ಎಂದರು.
'ಅಭಿವೃದ್ಧಿ ವಿಷಯ ಚರ್ಚಿಸುವ ಬೇಡಿಕೆಗೆ ಸಹಮತ'
ಸಚಿವ ಗೋವಿಂದ ಕಾರಜೋಳ, ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಇಲ್ಲಿಂದ ಅಭಿವೃದ್ಧಿ ಕೆಲಸ ಆಗಲಿ ಎಂದು ಇಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ಆದರೆ ದುರ್ದೈವದ ಸಂಗತಿಯೆಂದರೆ ಧರಣಿಯಂತಹ ಘಟನೆ ನಡೆಯುತ್ತಿವೆ, ಅಭಿವೃದ್ಧಿ ವಿಷಯ ಚರ್ಚಿಸುವ ಬೇಡಿಕೆ ಕುರಿತು ಸಹಮತವಿದೆ. ಚರ್ಚೆಗೆ ಸಿದ್ಧವಿದ್ದೇವೆ ಎಂದರು.
ಅಂತಿಮವಾಗಿ ಎಲ್ಲ ಸದಸ್ಯರ ಮನವಿ ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇಡೀ ದಿನ ಕಲಾಪ ನಡೆಸೋಣ, ನಾಳೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಮೀಸಲಿಡೋಣ ಎಂದು ರೂಲಿಂಗ್ ನೀಡಿದರು.
ಇದನ್ನೂ ಓದಿ: ಚೆನ್ನಮ್ಮ ಸರ್ಕಲ್ನಲ್ಲಿ ಬಾರುಕೋಲು ಚಳವಳಿ : ನೂರಾರು ರೈತರು ಪೊಲೀಸ್ ವಶಕ್ಕೆ