ಚಿಕ್ಕೋಡಿ: ಚರಂಡಿ ನೀರು ಜಮೀನಿಗೆ ನುಗ್ಗಿದ ಪರಿಣಾಮ ಎರಡು ವರ್ಷದಿಂದ ಬೆಳೆ ಬಾರದೆ ದನಗಳಿಗೆ ಮೇವು ಸಿಗುತ್ತಿಲ್ಲ ಎಂದು ರೈತರೊಬ್ಬರು ಸಂಕಷ್ಟ ತೋಡಿಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.
ವಾರ್ಡ್ ನಂ.9 ಪರೀಟ ಗಲ್ಲಿಯಲ್ಲಿರುವ ಚರಂಡಿ ಕಳೆದೆರಡು ವರ್ಷದಿಂದ ಸರಿಯಾದ ನಿರ್ವಹಣೆ ಇಲ್ಲದೆ ಕೊಳಚೆ ನೀರು ಪಕ್ಕದಲ್ಲಿರುವ ನಾಗೇಶ ಸುಭಾಷ್ ಎಕ್ಸಂಬಿ ಎಂಬುವವರ ಜಮೀನಿಗೆ ನುಗ್ಗುತ್ತಿದೆ. ಜಮೀನಿನಲ್ಲಿ ನಿತ್ಯ ಕೊಳಚೆ ನೀರು ಹರಿಯುತ್ತಿರುವ ಪರಿಣಾಮ ನಿರೀಕ್ಷಿಸಿದ ಬೆಳೆ ಬಾರದೆ ಜಮೀನಿನಲ್ಲಿ ಕೆಲಸವನ್ನೂ ಮಾಡಲಾಗದೆ ಸಾಕಷ್ಟು ತೊಂದರೆ ಅನುಭವಿಸುವುದಾಗಿ ರೈತ ನಾಗೇಶ್ ಹೇಳಿದ್ದಾರೆ.
ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಬಗೆಗಿನ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿದ್ದು ದೂರಿನ ಬಗ್ಗೆ ವರದಿ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಷ್ಟಾದ್ರೂ ಎಚ್ಚೆತ್ತುಕೊಳ್ಳಲಿಲ್ಲ ಎಂದು ಪುರಸಭೆ ಅಧಿಕಾರಿಗಳ ವಿರುದ್ಧ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಚರಂಡಿ ಪುನರ್ ನಿರ್ಮಾಣ ಇಲ್ಲವೇ ಚರಂಡಿಯನ್ನೇ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.