ಅಥಣಿ(ಬೆಳಗಾವಿ) : ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಶೇಷ ಕಾನೂನು ತರುವ ಅವಶ್ಯಕತೆಯಿದೆ. ಕೆಲವು ದುಷ್ಕ ಶಕ್ತಿಗಳನ್ನು ಮಟ್ಟಹಾಕಲು ಈಗಿರುವ ಕಾನೂನು ಸಾಲದು ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆ ಮಾಡಿ ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ನೀಡುವಂತ ಕಾನೂನು ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ಮಾಡುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ, ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವಂತವರಿಗೆ ತಕ್ಷಣವೇ ಶಿಕ್ಷೆ ಕೊಡುವಂತ ಕಾನೂನು ರಚನೆ ಆಗಬೇಕಾಗಿದೆ. ಕೆಲವರು ಉತ್ತರ ಪ್ರದೇಶ ಸರ್ಕಾರದಂತೆ ಉಗ್ರ ಕಾನೂನು ರೂಪಿಸುವಂತೆ ಕೇಳುತ್ತಿದ್ದಾರೆ. ಯುಪಿಗಿಂತಲೂ ಉಗ್ರ ಕಾನೂನು ರೂಪಿಸಲು ಸದ್ಯ ಚರ್ಚೆ ನಡೆಯುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ಸವದಿ ಮಾಹಿತಿ ನೀಡಿದ್ದಾರೆ.
ಸರ್ಕಾರಕ್ಕೆ ಒತ್ತಡ ತರಲು ರಾಜನಾಮೆ ನೀಡಿದ್ದಾರೆ : ಸದ್ಯ ಹಿಂದೂ ಯುವಕರ ಕೊಲೆಯಿಂದ ಭಾವಾತ್ಮಕವಾಗಿ ಕೆಲವು ಮಾತುಗಳು ಹಾಗೂ ರಾಜೀನಾಮೆ ಕೊಡುತ್ತಿದ್ದಾರೆ. ಅವರು ಯಾರು ಬಿಜೆಪಿಯನ್ನು ಬಿಟ್ಟುಕೊಡುವುದಿಲ್ಲ. ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಈ ರೀತಿ ಮಾಡುತ್ತಿದ್ದಾರೆ. ಅವರೆಲ್ಲರೂ ನಮ್ಮ ಕುಟುಂಬದವರು, ಅವರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ಸಿಎಂ ಭೇಟಿ ಬೆನ್ನಲ್ಲೇ ಮತ್ತೊಂದು ಕೊಲೆ : ಮಂಗಳೂರಿನಲ್ಲಿ ಯುವ ಮೋರ್ಚಾ ಕಾರ್ಯಕರ್ತನ ಕೊಲೆಯಾದಾಗ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿ ಮಂಗಳೂರುನಿಂದ ಸಿಎಂ ವಾಪಸ್ ಬರುವಾಗ ಸೂರತ್ಕಲ್ನಲ್ಲಿ ಮತ್ತೊಬ್ಬ ಯುವಕನ ಹತ್ಯೆಯಾಗಿದೆ. ಕೊಲೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ತನಿಖೆ ನಂತರ ತಿಳಿದು ಬರುತ್ತದೆ ಎಂದು ಸವದಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ : ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ