ಬೆಳಗಾವಿ: ಸುವರ್ಣಸೌಧ ಸಭಾಂಗಣದೊಳಗೆ ಅಂಬೇಡ್ಕರ್ ಫೋಟೋ ಎರಡು ವರ್ಷ ಆದರೂ ಹಾಕಿಲ್ಲ ಎಂದು ಜೆಡಿಎಸ್ ಶಾಸಕ ಡಾ.ಅನ್ನದಾನಿ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಊಟದ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದ ಹಾಗೇ ಅನ್ನದಾನಿ ಈ ವಿಷಯ ಪ್ರಸ್ತಾಪಿಸಿದರು. ಬೆಳಗಾವಿ ವಿಧಾನಸಭೆಯ ಒಳಗೆ ಅಂಬೇಡ್ಕರ್ ಫೋಟೋ ಇನ್ನೂ ಹಾಕಿಲ್ಲ. ಫೋಟೋ ಹಾಕುವ ವಿಚಾರವಾಗಿ ನಿಮಗೆ ಅಧಿಕಾರ ಇದೆ. ಈ ಬಗ್ಗೆ ಘೋಷಣೆ ಮಾಡಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಆಗ್ರಹಿಸಿದರು.
ಏಕಾಏಕಿ ವಿಚಾರ ಪ್ರಸ್ತಾಪಿಸಿ ಮಾತನಾಡಲು ಮುಂದಾದ ಅನ್ನದಾನಿ ನಡೆಗೆ ಸ್ಪೀಕರ್ ಕಾಗೇರಿ ಗರಂ ಆದರು. ಅಂಬೇಡ್ಕರ್ ಫೋಟೋ ಹಾಕುವ ವಿಚಾರ ಚರ್ಚೆಯ ವಿಚಾರ ಅಲ್ಲ. ಅಂಬೇಡ್ಕರ್ ಫೋಟೋ ಹಾಕೇ ಹಾಕುತ್ತೇವೆ. ಅಂಬೇಡ್ಕರ್ ಫೋಟೋ ಒಳಗೊಂಡಂತೆ ಇನ್ಯಾರರ ಫೋಟೋ ಹಾಕಬೇಕು ಎಂದು ಚರ್ಚೆ ಮಾಡಿ ಹಾಕ್ತೇವೆ. ಆದರೆ, ಏಕಾಏಕಿ ವಿಷಯ ಪ್ರಸ್ತಾಪಿಸಿದರೆ ಹೇಗೆ?. ನೀವು ಹೀಗೆ ನಡೆದರೆ ಸದನದ ಘನತೆ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಸ್ಪೀಕರ್ ಕಾಗೇರಿ ಆಕ್ಷೇಪಿಸಿದರು.
ಇದನ್ನೂ ಓದಿ: ಭ್ರಷ್ಟಾಚಾರದ ಜನಕ ಹೋಗಿದ್ದಾರೆ, ಈಗ ಭ್ರಷ್ಟಾಚಾರ ಕಡಿಮೆ ಆಗ್ತಿದೆ : ಬಿಎಸ್ವೈಗೆ ಯತ್ನಾಳ್ ಟಾಂಗ್
ಅಶಿಸ್ತು ಸಹಿಸುವುದಿಲ್ಲ. ಇದ್ದಕ್ಕಿಂದಂತೆ ಏನೋ ವಿಚಾರ ತೆಗೆದು ಮಾತನಾಡಿದರೆ ಹೇಗೆ?. ಮಧ್ಯದಲ್ಲಿ ಯಾವ್ಯಾವ ವಿಚಾರವನ್ನು ಪ್ರಸ್ತಾಪ ಮಾಡಿದರೆ ಹೇಗೆ?. ನಿಯಮಾವಳಿ ಪ್ರಕಾರ ಈ ವಿಚಾರವನ್ನು ಪ್ರಸ್ತಾಪ ಮಾಡಬೇಕು. ಸದನದ ಘನತೆ ಗೌರವ ಎತ್ತಿಹಿಡಿಯುವ ಜವಾಬ್ದಾರಿ ಬೇಕಲ್ವಾ? ಎಂದು ಏರು ಧ್ವನಿಯಲ್ಲಿ ಸ್ಪೀಕರ್ ತರಾಟೆಗೆ ತೆಗೆದುಕೊಂಡರು.
ನಾನು ಸಾವಿರ ಬಾರಿ ಹೇಳಿದ್ದೇನೆ. ಅಶಿಸ್ತು ಸಹಿಸುವುದಿಲ್ಲ ಅಂತ. ಕಲಾಪ ಆರಂಭಕ್ಕೂ ಮುನ್ನ ನನ್ನಲ್ಲಿ ಬಂದು ಹೇಳಿ ಪ್ರಸ್ತಾಪ ಮಾಡಿದರೆ ಅದಕ್ಕೆ ಅರ್ಥ ಇರುತ್ತದೆ. ನಿಮಗೆ ಅನುಭವ ಇದೆ. ಈ ನಿಟ್ಟಿನಲ್ಲಿ ಸದನದ ಗೌರವ ಕಾಪಾಡಬೇಕು. ನೀವು ಅಧ್ಯಾಪಕರಾಗಿ ಕೆಲಸ ಮಾಡಿದವರು. ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ?. ನೀವು ಹೇಳಿರುವ ವಿಚಾರ ಜಾರಿಗೆ ತರಲು ಸದನ ಬದ್ಧವಾಗಿದೆ. ಆದರೆ, ಗೌರವದ ರೀತಿಯಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕು. ಹಿರಿಯರು ಜೊತೆ ಸಮಾಲೋಚನೆ ಮಾಡಿ ಮುಂದಿನ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಬೇಡ್ಕರ್ ಭಾವಚಿತ್ರ ಅಳವಡಿಕೆ ಸಂಬಂಧ ಸ್ಪೀಕರ್ ಜೊತೆ ಚರ್ಚಿಸಿದ್ದೇವೆ: ಸತೀಶ್ ರೆಡ್ಡಿ
ಅಂಬೇಡ್ಕರ್ ಫೋಟೋ ಅಳವಡಿಸುವ ವಿಚಾರ ಬಿಜೆಪಿಯ ಎಲ್ಲಾ ಸದಸ್ಯರು ಸೇರಿ ಸ್ಪೀಕರ್ಗೆ ಮನವಿ ಮಾಡಿದ್ದೇವೆ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಕಾಲದಲ್ಲಿ ಫೋಟೋ ಹಾಕಲು ಆಗಿಲ್ಲ. ಆದ್ರೀಗ ಅವರ ಭಾವಚಿತ್ರ ಹಾಕಬೇಕು ಎಂದು ಮನವಿ ಮಾಡಿದ್ದೇವೆ. ಸ್ಪೀಕರ್ ಸಮಾಲೋಚನೆ ಮಾಡಿ ಅಂಬೇಡ್ಕರ್ ಫೋಟೋ ಹಾಕಲು ಅನುಮತಿ ನೀಡ್ತಾರೆ. ಸ್ಪೀಕರ್ ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದರು.
ಬೆಂಗಳೂರು ಉಸ್ತುವಾರಿ ವಿಚಾರ ಮಾತನಾಡಿ, ಸಿಎಂ ಬೊಮ್ಮಾಯಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಈ ವೇಳೆ ಇನ್ನೊಬ್ಬರ ಹೆಸರು ಬೇಡ. ಬೆಂಗಳೂರು ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಕೇಳಿದ್ದೇವೆ. ಅನುದಾನ ಬಿಡುಗಡೆ ಮಾಡ್ತಾರೆ ಎಂಬ ನಂಬಿಕೆ ಇದೆ. ಎಲ್ಲರಿಗೂ ನಿಭಾಯಿಸುವ ಶಕ್ತಿ ಇದೆ. ಆದರೆ, ಸಿಎಂ ಫೈನಾನ್ಸ್ ಮಿನಿಸ್ಟರ್ ಕೂಡ ಆಗಿದ್ದಾರೆ. ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಸದ್ಯ ಬೇರೆಯವರ ಹೆಸರು ಬೇಡ ಎಂದರು.