ಬೆಳಗಾವಿ: ಬರುವ ಬಜೆಟ್ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹದಾಯಿ ಯೋಜನೆಗೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಲಪ್ರಭಾ ನದಿಯಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಡಿಪಿಆರ್ ರೆಡಿಯಾಗುತ್ತಿದೆ. ಈ ಯೋಜನೆಯ ಕುರಿತು ನಮ್ಮ ನಮ್ಮಲ್ಲಿಯೇ ಜಗಳವಾಡುವುದು ಸರಿಯಲ್ಲ. ಕುಡಿಯುವ ನೀರು ಎಲ್ಲರಿಗೂ ಬೇಕು. ಆತಂರಿಕ ಕಚ್ಚಾಟವನ್ನು ಯಾರೂ ಮಾಡಬಾರದು ಎಂದರು.
ಮಲಪ್ರಭಾ ನದಿಯ ನೀರನ್ನು ಹುಬ್ಬಳ್ಳಿ, ಧಾರವಾಡ, ರೋಣ ಸೇರಿದಂತೆ ಹಲವಾರು ನಗರಗಳ ಜನ ಕುಡಿಯುತ್ತಾರೆ. ಈಗ ಇದೇ ನದಿಯಿಂದ ನೂರಾರು ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ತಕರಾರು ಮಾಡುವುದು ಸರಿಯಲ್ಲ. ಈಗ ಮಹದಾಯಿ ಸಮಸ್ಯೆ ಇತ್ಯರ್ಥವಾಗಿದೆ. ಹೆಚ್ಚು ಟಿಎಂಸಿ ನೀರು ಮಲಪ್ರಭೆಗೆ ಹರಿದು ಬರುತ್ತದೆ. ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಿಂದ ಯಾರಿಗೂ ತೊಂದರೆ ಆಗೋದಿಲ್ಲ. ಕೇಂದ್ರ ಸರ್ಕಾರ ಮಹದಾಯಿ ತೀರ್ಪಿನ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಬಜೆಟ್ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದರು.