ಬೆಳಗಾವಿ: ತೋಟದಲ್ಲಿರುವ ದನಗಳಿಗೆ ಹುಚ್ಚು ನರಿಯೊಂದು ಕಚ್ಚಿದ ಪರಿಣಾಮ 22ಕ್ಕೂ ಹೆಚ್ಚು ದನಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಡಿಸೆಂಬರ್ 26ರಿಂದ ಕೆಲವು ಎಮ್ಮೆ ಆಕಳು - ಕರುಗಳು ಹಠಾತ್ತಾಗಿ ಸಾವನ್ನಪ್ಪುತ್ತಿದ್ದವು. ಇದರಿಂದ ರೈತರು ಆತಂಕಗೊಂಡು, ಡಿಸೆಂಬರ್ 31ರಂದು ಪಶು ಇಲಾಖೆ ಗಮನಕ್ಕೆ ತಂದಿದ್ದರು. ಬೆಳಗಾವಿ ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಎ.ಕೆ.ಚಂದ್ರಶೇಖರ್, ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಹುಚ್ಚು ನರಿ ಕಚ್ಚಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಈ ಹಿನ್ನೆಲೆ ಎಲ್ಲ ದನಕರುಗಳಿಗೆ ರೇಬಿಸ್ ಚುಚ್ಚು ಮದ್ದು ಕೊಡಿಸಿ, ವೆಂಕಟಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ನಿಗಾ ವಹಿಸಲಾಗಿದೆ. ಸದ್ಯ ದನಗಳ ಸಾವು ನಿಯಂತ್ರಣಕ್ಕೆ ಬಂದಿದೆ. ಮೃತಪಟ್ಟ ದನಗಳ ಮೆದುಳಿನ ಭಾಗವನ್ನು ಬೆಂಗಳೂರು ಮತ್ತು ಊಟಿಯಲ್ಲಿರುವ ರೇಬಿಸ್ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಶು ಇಲಾಖೆಯ ಸಹ ನಿರ್ದೇಶಕ ಡಾ.ಎಂ.ವಿ.ಕಾಮತ್, ಡಾ.ಎಂ.ಬಿ.ವಿಭೂತಿ, ಡಾ.ಬಿ.ಎಸ್.ಗೌಡರ್, ಡಾ.ಪ್ರಶಾಂತ್ ಕುರಬೇಟ, ಎಂ.ಬಿ.ಹೊಸೂರ, ಸುರೇಶ ಆದಪ್ಪಗೋಳ ಮತ್ತು ಎಸ್.ಜಿ. ಮಿಲ್ಲಾನಟ್ಟಿ ಸೇರಿದಂತೆ ಇತರ ವೈದ್ಯರು ದನ - ಕರುಗಳಿಗೆ ಲಸಿಕೆ ನೀಡುತ್ತಿದ್ದು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ : ಮೂವರು ಸಾವು,7 ಮಂದಿ ಗಾಯ