ಬೆಳಗಾವಿ: ನೂತನ ಭೂ ಸುಧಾರಣಾ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ನಗರದ ಚನ್ನಮ್ಮ ವೃತ್ತದಿಂದ ಕೇಂದ್ರ ಸಚಿವ ಸುರೇಶ ಅಂಗಡಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈಚೆಗೆ ತಿದ್ದುಪಡಿ ಮಾಡಿರುವ ನೂತನ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಈ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಬಲಾಢ್ಯರು, ಕೈಗಾರಿಕೋದ್ಯಮಿಗಳು ರೈತರ ಭೂಯಿಯನ್ನು ಸುಲಭವಾಗಿ ಕಬಳಿಸಬಹುದು. ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಹಿಡಿತ ಸಾಧಿಸುತ್ತವೆ ಎಂದು ದೂರಿದರು.
ಜೊತೆಗೆ ಈಚೆಗೆ ಜಾರಿಗೊಳಿಸಿರುವ ಎಪಿಎಂಸಿ ಕಾಯ್ದೆಯೂ ಕೂಡ ರೈತರಿಗೆ ಮಾರಕವಾಗಿದೆ. ರೈತರ ಹಿತ ಕಾಪಾಡಬೇಕಾದ ಸರ್ಕಾರ ಈ ರೀತಿಯ ಅವೈಜ್ಞಾನಿಕ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವುದಿಲ್ಲ. ಕೇಂದ್ರ ಸರ್ಕಾರ 14 ಬೆಳೆಗಳಿಗೆ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ಕಳೆದ ವರ್ಷ ಘೋಷಣೆ ಮಾಡಲಾದ ಬೆಲೆಗಿಂತ ಕಡಿಮೆ ಇದೆ.
ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ, ಎಂಎಸ್ಪಿ ನೀತಿ, ಹೊಸ ವಿದ್ಯುತ್ ನೀತಿ, ಹೊಸ ಬೀಜ ನೀತಿ ಸೇರಿದಂತೆ ಅನೇಕ ಯೋಜನೆಗಳು ಕಾರ್ಪೋರೇಟ್ಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿದೆ. ಕೂಡಲೇ ಸರ್ಕಾರ ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆಗಳು ಸೇರಿದಂತೆ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ರೈತ ಮುಖಂಡರಾದ ಚೂನಪ್ಪ ಪೂಜೇರಿ, ಅಶೋಕ ಯಮಕನಮರಡಿ, ರಾಘವೇಂದ್ರ ನಾಯಕ, ಜಯಶ್ರೀ ಗುರನ್ನವರ ಮೊದಲಾದವರು ಉಪಸ್ಥಿತರಿದ್ದರು.