ಬೆಳಗಾವಿ: ಆಟೋ, ಟೆಂಪೋ ಚಾಲಕರಿಂದ ಆರ್ಟಿಓ ಅಧಿಕಾರಿಗಳು ದಂಡ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಹಿನ್ನೆಲೆ ನಗರದ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಆರ್ಟಿಓ ಕಚೇರಿಗೆ ಆಗಮಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಹೆಬ್ಬಾಳ್ಕರ್, ಆಟೋ, ಟೆಂಪೋ ಚಾಲಕರಿಂದ ಆರ್ಟಿಓ ಅಧಿಕಾರಿಗಳು ತಪಾಸಣೆ ಹೆಸರಲ್ಲಿ ದಂಡ ವಸೂಲಿ ಮಾಡುತ್ತಿದ್ದಾರೆ. ಅವರೆಲ್ಲ ಹೊಟ್ಟೆಪಾಡಿಗಾಗಿ ಮಳೆಯಲ್ಲಿ, ಚಳಿಯಲ್ಲಿ, ಬಿಸಿಲಲ್ಲಿ ದುಡಿಯುತ್ತಿದ್ದಾರೆ. ಕಳ್ಳತನ, ಮೋಸ, ಸುಳ್ಳು ಹೇಳದೆ ಬೆವರು ಸುರಿಸಿ ದುಡಿಯವವರ ಮೇಲೆ ಯಾಕೆ ಕೇಸ್ ಹಾಕ್ತುತ್ತಿದ್ದೀರಿ ಎಂದು ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಮೇಲಿನವರು ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಕೇಸ್ ಹಾಕಿದ್ರೆ ಹೇಂಗೆ.? ಅವರು ಎಲ್ಲಿ ಸಾಯಬೇಕು. ಅವರೇನು ಶ್ರೀಮಂತರಲ್ಲ. ಸಾಲ ಕಟ್ಟಿ, ಉಳಿದ ದುಡ್ಡಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನಿಮಗೆ ಟಾರ್ಗೆಟ್ ಕೊಟ್ಟಿರುವುದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಿರಾ?. ನೀವು ಸರ್ಕಾರಿ ನೌಕರರು. ನಾನು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾನೂನು ಚೌಕಟ್ಟು ಬಿಟ್ಟು ಏನು ಆಗಲ್ಲ. ಬಡವರಿಗೆ ತೊಂದರೆ ಆಗಬಾರದು ಎಂದು ನಿಮ್ಮ ಬಳಿ ಬಂದಿದ್ದೇನೆ. ಇವತ್ತು ನಿಮ್ಮ ಮುಂದೆ ಕುಳಿತಿದ್ದೇನೆ. ನಾಳೆ, ನಿಮ್ಮ ಕಚೇರಿ ಮುಂದೆ ಬಂದು ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಎಲ್ಲವನ್ನೂ ನೀವು ಕಾನೂನು ಪ್ರಕಾರ ಮಾಡ್ತಿರಾ? ನಿಮ್ಮಗೆ ಒತ್ತಡ ಇದ್ರೆ ಅದನ್ನು ಬೇರೆ ರೀತಿಯಲ್ಲಿ ನಿವಾರಿಸಬೇಕು. ಅದನ್ನು ಬಿಟ್ಟು ದುಡಿದು ತಿನ್ನುವ ವರ್ಗಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಮೊದಲೇ ದೇಶದಲ್ಲಿ ಉದ್ಯೋಗ ಇಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಪರೀಕ್ಷಾ ಫಲಿತಾಂಶ ಪ್ರಕಟಿಸಲು ವಿಳಂಬ ನೀತಿ: ಕೆಪಿಎಸ್ಸಿ ವಿರುದ್ಧ ಪ್ರತಿಭಟನೆ