ಬೆಳಗಾವಿ : ಈ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಇದು ಸೇರಿದಂತೆ ವಿವಿಧ ವಿಚಾರಗಳಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲು ತೀರ್ಮಾನಿಸಿದೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಸೋಮವಾರ ಬೆಳಗಾವಿಯಲ್ಲಿ ಸಭೆ ಸೇರಲಿದ್ದಾರೆ.
anti conversion bill : ಮೊದಲ ವಾರ ಒಂದಿಷ್ಟು ಹೋರಾಟ ಕೈಗೊಂಡು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ಕಾಂಗ್ರೆಸ್ ಪಕ್ಷ ಎರಡನೇ ವಾರದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗದಂತೆ ತಡೆಯಲು ನಿರ್ಧರಿಸಿದೆ. ಉಭಯ ಸದನಗಳಲ್ಲೂ ಬಿಲ್ಅನ್ನು ವಿಫಲಗೊಳಿಸಲು ತೀರ್ಮಾನಿಸಿದ್ದು, ಕಡ್ಡಾಯವಾಗಿ ಮುಂದಿನವಾರ ಕಲಾಪದಲ್ಲಿ ಉಪಸ್ಥಿತರಿರುವಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸೂಚಿಸಿ ವಿಪ್ ಜಾರಿಗೊಳಿಸಿದೆ. ಸರ್ಕಾರವನ್ನ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಮುಜುಗರಕ್ಕೀಡು ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯತಂತ್ರ ಹೆಣೆಯಲು ರಾಜ್ಯ ಕಾಂಗ್ರೆಸ್ ನಾಯಕರು ಸೋಮವಾರ ಸಭೆ ಸೇರಿ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಮುಂದಿನ ವಾರದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ನಡೆಸಬಹುದಾದ ಚರ್ಚೆ ಹಾಗೂ ಇತರೆ ವಿಚಾರಗಳ ಕುರಿತು ಈ ಸಭೆಯಲ್ಲಿ ಸದಸ್ಯರಿಂದ ಸಲಹೆ-ಸೂಚನೆ ಸ್ವೀಕರಿಸುವ ಕಾರ್ಯ ಆಗಲಿದೆ. ಈ ಹಿನ್ನೆಲೆ ಸದಸ್ಯರಿಗೆ ಸೂಚಿಸಬಹುದಾದ ವಿಚಾರಗಳ ಕುರಿತು ನಾಳೆ ರಾಜ್ಯ ನಾಯಕರು ಸಭೆ ಸೇರಿ ಚರ್ಚಿಸಲಿದ್ದಾರೆ.
ಬೆಳಗಾವಿಯಲ್ಲಿಲ್ಲ ನಾಯಕರು:
Belagavi winter session : ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಶನಿವಾರವೇ ಬಾದಾಮಿ ಕ್ಷೇತ್ರದ ಪ್ರವಾಸದ ನಿಮಿತ್ತ ತೆರಳಿದ್ದಾರೆ. ತಮ್ಮ ಅಜ್ಜಿಯ ನಿಧನ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಉಳಿದ ನಾಯಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿರುವ ಹಿನ್ನೆಲೆ ಶನಿವಾರ ಮತ್ತು ಭಾನುವಾರ ವಿಧಾನಮಂಡಲ ಅಧಿವೇಶನಕ್ಕೆ ವಿರಾಮ ಇದ್ದರೂ, ಕಾಂಗ್ರೆಸ್ ನಾಯಕರಿಗೆ ಸಭೆ ಸೇರಲು ಸಾಧ್ಯವಾಗಿಲ್ಲ. ಸೋಮವಾರ ಎಲ್ಲಾ ನಾಯಕರು ಬೆಳಗಾವಿಗೆ ವಾಪಸಾಗಲಿದ್ದಾರೆ. ಮಧ್ಯಾಹ್ನದ ವೇಳೆ ಸುವರ್ಣವಿಧಾನಸೌಧದಲ್ಲಿ ಇಲ್ಲವೇ ಸಂಜೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಭೆ ಸೇರುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಹೋರಾಟಗಳ ಕುರಿತು ಇದೇ ಸಂದರ್ಭ ನಾಯಕರು ಚರ್ಚಿಸಲಿದ್ದಾರೆ. ಮುಂದಿನ ಐದು ದಿನದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಯಾವ್ಯಾವ ವಿಚಾರ ಪ್ರಸ್ತಾಪಿಸಬೇಕು ಹಾಗೂ ಯಾವ ಸದಸ್ಯರು ಹಿಂದುಗಳ ಮೇಲೆ ಮಾತನಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದೆ. ಅಲ್ಲದೆ ಮಂಗಳವಾರ ನಡೆಯುವ ಶಾಸಕಾಂಗ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಪ್ರಕಟವಾಗಲಿದೆ.