ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಎಂಇಎಸ್ ಕಾರ್ಯಕರ್ತರು ದಿನಕ್ಕೊಂದು ನಾಟಕ ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮತ್ತೆ ಭಾಷಾ ರಾಜಕಾರಣದ ವಿಷಬೀಜ ಬಿತ್ತಲು ಎಂಇಎಸ್ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಗಣೇಶ ನಿಮಜ್ಜನ ಕಾರ್ಯಕ್ರಮದ ವೇದಿಕೆ ಮೇಲೆ ಕನ್ನಡ ನಾಮಫಲಕವಷ್ಟೇ ಇದ್ದಿದ್ದಕ್ಕೆ ಎಂಇಎಸ್ ಕಾರ್ಯಕರ್ತರು ಕಂಗೆಟ್ಟಿದ್ದಾರೆ. ಹಾಗಾಗಿ, ಎಂಇಎಸ್ ಕಾರ್ಯಕರ್ತರ ವಿರುದ್ಧ ಕಿಡಿಕಾರಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಮರಾಠಿ ಭಾಷಿಗರ ಪ್ರಚೋದನೆಗೆ ಯತ್ನಿಸುತ್ತಿದ್ದಾರೆ. ಮರಾಠಿ ಭಾಷಿಗರ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಧಮ್ಕಿ ಹಾಕಿದ್ದಾರೆ ಎಂದು ಪೋಸ್ಟ್ ಹಾಕಲಾಗಿದೆ.
ಅಧಿಕಾರಿಗೆ ಆವಾಜ್ ಹಾಕಿದ್ದ ಎಂಇಎಸ್ ಕಾರ್ಯಕರ್ತರು
ಮೊನ್ನೆ ರಾತ್ರಿ ಬೆಳಗಾವಿಯಲ್ಲಿ ಗಣೇಶ ನಿಮಜ್ಜನ ವೇಳೆ ಕಾರ್ಯಕ್ರಮದ ವೇದಿಕೆ ಮೇಲೆ ಕನ್ನಡ ಬೋರ್ಡ್ ಮಾತ್ರ ಇದ್ದಿದ್ದಕ್ಕೆ ಎಂಇಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಮಹಿಳಾ ಅಧಿಕಾರಿ ಲಕ್ಷ್ಮಿ ನಿಪ್ಪಾಣಿಕರ ಅವರಿಗೆ 'ನಿನ್ನ ನೋಡ್ಕೋತಿನಿ' ಎಂದು ಆವಾಜ್ ಹಾಕಿದ್ದರು. ಆಗ ಅವ್ರಿಗೆ ಮಹಿಳಾ ಅಧಿಕಾರಿ ಲಕ್ಷ್ಮಿ ನಿಪ್ಪಾಣಿಕರ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದರು.
ಇದನ್ನೂ ಓದಿ: ಪಾಲಿಕೆ ಮಹಿಳಾ ಅಧಿಕಾರಿ ಉಗ್ರಾವತಾರಕ್ಕೆ ಬೆದರಿದ ಎಂಇಎಸ್ ಕಾರ್ಯಕರ್ತರು
ಎಂಇಎಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ
ಇದಾದ ಬಳಿಕ ಎಂಇಎಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಾಮಫಲಕ ತೆರವುಗೊಳಿಸಿದ್ದ ಅಧಿಕಾರಿಗಳ ವಿರುದ್ಧವೂ ಎಂಇಎಸ್ ಕಾರ್ಯಕರ್ತರು ಕಿಡಿ ಕಾರಿದ್ದಾರೆ. ಎಂಇಎಸ್ ಬೋರ್ಡ್ ತೆರವು ವಿಚಾರ ಬಗ್ಗೆ ಎಂಇಎಸ್ ಯುವ ಸಮಿತಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಭಾಷಾ ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ. ಹಾಗಾಗಿ ಎಂಇಎಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.