ಬೆಳಗಾವಿ: ಹಿಂಡಲಗಾ ಗ್ರಾ.ಪಂ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಜೊತೆಗೆ 12 ಉಪಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆಂದು ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹೇಳಿದರು. ಬೆಳಗಾವಿಯ ಲಕ್ಷ್ಮಿನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಪೊಲೀಸರು ಇದೀಗ ಉಪಗುತ್ತಿಗೆದಾರರ ಬಳಿಯೂ ಮಾಹಿತಿ ಪಡೆದಿದ್ದಾರೆ. 4 ಕೋಟಿ ರೂ ವೆಚ್ಚದಲ್ಲಿ 108 ಕಾಮಗಾರಿಗಳನ್ನು ಎಲ್ಲರೂ ಸೇರಿ ಮಾಡಿದ್ದಾರೆ ಎಂದರು.
ಸಂತೋಷ್ ಪಾಟೀಲ್ ಸುಮಾರು 50 ಲಕ್ಷದ ಕಾಮಗಾರಿಯನ್ನು ಸ್ವತಃ ಮಾಡಿದ್ದರು, ಉಳಿದವರಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಿದ್ದರು. ಒಟ್ಟಾರೆ 4 ಕೋಟಿ 12 ಲಕ್ಷ ರೂಪಾಯಿ ಎಸ್ಟಿಮೇಟ್ ಇತ್ತು. ಆರ್ಡಿಪಿಆರ್ ಫಂಡ್ ಇದೆಯೆಂದು ಸಂತೋಷ್ ಪಾಟೀಲ್ ಹೇಳುತ್ತಿದ್ದ ಎಂದು ಅವರು ಹೇಳಿದರು.
ಕಾಮಗಾರಿ ಕುರಿತು ಪಂಚಾಯತಿಯಲ್ಲಿ ಯಾವುದೇ ಠರಾವು ಪಾಸ್ ಮಾಡಿಲ್ಲ. ಆರ್ಡಿಪಿಆರ್ ಸ್ಪೆಷಲ್ ಫಂಡ್ ಇದೆ, ಹೀಗಾಗಿ ಠರಾವು ಅಗತ್ಯವಿಲ್ಲ ಎಂದು ಸಂತೋಷ್ ಪಾಟೀಲ್ ಹೇಳಿದ್ದ. ಹಿಂಡಲಗಾ ಗ್ರಾಮದಲ್ಲಿ ಕಾಮಗಾರಿ ಆಗಿದ್ದು ನಿಜ, ಒಳ್ಳೆಯ ಕೆಲಸ ಆಗಿವೆ. ಸಂತೋಷ್ ಪಾಟೀಲ್‌ಗೆ ಹಣದ ವಿಚಾರವಾಗಿ ಯಾರೂ ಒತ್ತಡ ಹಾಕಿರಲಿಲ್ಲ. ಸಂತೋಷ್, ಸಬ್ ಕಾಂಟ್ರಾಕ್ಟರಗಳ ಮಧ್ಯೆ ಸಂಬಂಧ ಚೆನ್ನಾಗಿತ್ತು. ಈಶ್ವರಪ್ಪರನ್ನು ಎರಡು ಬಾರಿ ಭೇಟಿಯಾಗಿದ್ದೆವು. ನನಗೆ ಕನ್ನಡ ಭಾಷೆಯ ಸಮಸ್ಯೆ ಇದ್ದುದರಿಂದ ಅವರೇನು ಮಾತನಾಡಿದ್ದರು ಎಂಬುದು ಅರ್ಥವಾಗಿಲ್ಲ. ಸಂತೋಷ್ ಈಶ್ವರಪ್ಪನವರ ಜೊತೆ ಮಾತನಾಡುತ್ತಿದ್ದರು ಎಂದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ, ಸರಳವಾಗಿರಲಿದೆ ಈ ವರ್ಷದ ಪರೀಕ್ಷೆ
ಪ್ರಕರಣ ಸಂಬಂಧ ಉಡುಪಿ ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಸಂತೋಷ್ ಪಾಟೀಲ್ ನಿರ್ವಹಿಸಿದ್ದ 108 ಕಾಮಗಾರಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ ಎಂದು ತಿಳಿಸಿದರು.