ಬೆಳಗಾವಿ: ಮಹಾರಾಷ್ಟ್ರ ಘಟ್ಟ ಪ್ರದೇಶ ಮತ್ತು ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಕೋಡಿ ಉಪವಿಭಾಗದ ನಾಲ್ಕು ಸೇತುವೆಗಳು ಮುಳುಗಡೆ ಆಗಿವೆ. ಬಿರುಗಾಳಿ ಸಮೇತ ಬಿಟ್ಟುಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಜನರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೆಳಹಂತದ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಎರಡು ಬದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ಬಂದ್ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಗೆ ಕಟ್ಟಲಾದ ಕಾರದಗಾ-ಭೋಜ್, ವೇದಗಂಗಾ ನದಿಯಿಂದ ಭೋಜವಾಡಿ ಕುನ್ನೂರ-ಸಿದ್ನಾಳ ಅಕ್ಕೋಳ ಸೇತುವೆ ಹಾಗೂ ಜತ್ರಾಟ-ಭೀಮಶಿ ಸೇತುವೆಗಳು ಜಲಾವೃತವಾಗಿವೆ. ಸದ್ಯ ಮಹಾರಾಷ್ಟ್ರ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕೃಷ್ಣಾ ನದಿತೀರದ ಜನರ ಆತಂಕಕ್ಕೆ ಕಾರಣವಾಗಿದೆ.
ಬೆಳಗಾವಿ ನಗರದಲ್ಲೂ ಮಳೆರಾಯನ ಆರ್ಭಟಕ್ಕೆ ಐದಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನಗರ ಪ್ರದೇಶದಲ್ಲಿ ಕಾಳಜಿ ಕೇಂದ್ರ ತೆರೆದಿದೆ. ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನು ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಬೆಳಗಾವಿ ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಆರೋಗ್ಯ ಕಿಟ್ ವಿತರಣೆ ಮಾಡಿದ್ದಾರೆ.
(ಇದನ್ನೂ ಓದಿ: ಬೆಳಗಾವಿಯಲ್ಲಿ ಮಳೆ ಅಬ್ಬರಕ್ಕೆ ಮನೆ ಕುಸಿತ; ಮಹಿಳೆಗೆ ಗಂಭೀರ ಗಾಯ, ನಾಲ್ಕು ವಾಹನಗಳು ಜಖಂ)