ಬೆಳಗಾವಿ: ಕಳೆದೆರಡು ದಿನಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಗೋಕಾಕ್ ತಾಲೂಕಿನ ಕೊಣ್ಣೂರು-ಘೋಡಗೇರಿ ರಸ್ತೆ ಹೊಳೆಯಂತಾಗಿದೆ. ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿ ತೊಂದರೆಯಾಗಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.
ಕ್ಷೇತ್ರ ಪ್ರದಕ್ಷಿಣೆ: ಕುಂದಾನಗರಿಯಲ್ಲಿ ಕಳೆದ ರಾತ್ರಿಯಿಂದ ಮಳೆ ಸುರಿಯುತ್ತಿದ್ದು ಬೆಳ್ಳಂಬೆಳಗ್ಗೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಕ್ಷೇತ್ರ ಪ್ರದಕ್ಷಿಣೆ ಹಾಕಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ವಿವಿಧೆಡೆ ಪಾಲಿಕೆ ಸದಸ್ಯರು, ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶಾಸಕ, 'ಕಳೆದ ವರ್ಷ ಮಳೆ ನೀರು ಹಲವು ಪ್ರದೇಶಗಳಿಗೆ ನುಗ್ಗಿತ್ತು. ಹೀಗಾಗಿ, ಇಂದು ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಜೊತೆ ಭೇಟಿ ನೀಡಿರುವೆ. ಮಂಗಾಯಿ ನಗರದ ಬಳಿಯಿರುವ ಕೆರೆ ಪಕ್ಕದ ರಸ್ತೆ ಮೇಲೆ ನೀರು ಬಂದಿದೆ. ಮಾಧ್ವಾ ರಸ್ತೆಯ ಒಳಚರಂಡಿ ನೀರು ರಸ್ತೆ ಮೇಲೆ ಬಂದಿದ್ದರಿಂದ ಸಮಸ್ಯೆ ಉಂಟಾಗಿದೆ. ಈ ಎರಡೂ ಕಡೆ ಬಿಟ್ಟರೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಏನು ಸಮಸ್ಯೆಯಾಗಿಲ್ಲ' ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ: ದಾವಣಗೆರೆ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ