ಬೆಳಗಾವಿ/ಧಾರವಾಡ: ಮೆದುಳು ನಿಷ್ಕ್ರಿಯವಾದ ಹಿಂದೂ ಬಾಲಕಿಯ ಹೃದಯವನ್ನು ಮುಸ್ಲಿಂ ಯುವಕನಿಗೆ ಕಸಿ ಮಾಡಲು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಜೀರೋ ಟ್ರಾಫಿಕ್ನಲ್ಲಿ ರವಾನಿಸಲಾಯಿತು. ವೈದ್ಯರು ಈಗಾಗಲೇ ಹೃದಯ ಕಸಿ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, 6 ಗಂಟೆಯಲ್ಲಿ ಪೂರ್ಣವಾಗಲಿದೆ.
ಜೀರೋ ಟ್ರಾಫಿಕ್ನಲ್ಲಿ ರವಾನೆ: ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದರಿಂದ ಉತ್ತರ ಕನ್ನಡ ಜಿಲ್ಲೆಯ 15 ವರ್ಷದ ಹಿಂದೂ ಬಾಲಕಿಯನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಮೆದುಳು ನಿಷ್ಕ್ರಿಯವಾದ ಹಿನ್ನೆಲೆಯಲ್ಲಿ ಇಂದು ಅಂಗಾಂಗ ದಾನಕ್ಕೆ ಬಾಲಕಿಯ ಪೋಷಕರು ನಿರ್ಧರಿಸಿದ್ದರು. ಅಂತೆಯೇ ಬಾಲಕಿಯ ಎರಡು ಮೂತ್ರಪಿಂಡ, ಹೃದಯ ಹಾಗೂ ಯಕೃತ್ ದಾನಕ್ಕೆ ಪೋಷಕರು ಒಪ್ಪಿಗೆ ಸೂಚಿದ್ದರು.
50 ನಿಮಿಷದಲ್ಲಿ ಆಸ್ಪತ್ರೆ ತಲುಪಿದ ಹೃದಯ: ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ 22 ವರ್ಷದ ಮುಸ್ಲಿಂ ಯುವಕನೊಬ್ಬ ಹೃದ್ರೋಗದಿಂದ ಬಳಲುತ್ತಿದ್ದರು. ಆ ಯುವಕನಿಗೆ ಕಸಿ ಮಾಡಲು ಬಾಲಕಿಯ ಹೃದಯವನ್ನು ರವಾನಿಸಲಾಗಿದೆ. ಜೀರೋ ಟ್ರಾಫಿಕ್ನಲ್ಲಿ ಎರಡು ಪೊಲೀಸ್ ಬೆಂಗಾವಲು ವಾಹನದ ಸಹಾಯದಿಂದ ಕೆಎಲ್ಇ ಆಸ್ಪತ್ರೆಗೆ ಬಾಲಕಿಯ ಹೃದಯ ರವಾನೆ ಆಗಿದೆ.
ಕೇವಲ 50 ನಿಮಿಷದಲ್ಲಿ ಅಂಗಾಂಗ ಆಸ್ಪತ್ರೆಯನ್ನು ತಲುಪಿದೆ. ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ರಿಚರ್ಡ್ ಸಾಲ್ಡಾನಾ ನೇತೃತ್ವದಲ್ಲಿ 6 ಗಂಟೆಗಳ ಕಾಲ ಹೃದಯ ಚಿಕಿತ್ಸೆ ನಡೆಯಲಿದೆ.
ಹಾಗೆಯೇ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಯಕೃತ್ ಕಸಿ ಮಾಡಲಾಗುತ್ತಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣವರೆಗೆ ಜೀರೊ ಟ್ರಾಫಿಕ್ ಮೂಲಕ ಆ್ಯಂಬುಲೆನ್ಸ್ ಮೂಲಕ ಕಳುಹಿಸಲಾಯಿತು. ಇನ್ನು ಕಿಡ್ನಿಗಳಲ್ಲಿ ಒಂದು ಎಸ್‌ಡಿಎಂ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ತತ್ವದರ್ಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.