ಬೆಳಗಾವಿ : ಅಶ್ಲೀಲ ಸಂದೇಶ ಕಳುಹಿಸಿ ಚಪ್ಪಲಿ ಏಟು ತಿಂದಿದ್ದ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಬೆಳಗಾವಿ ಡಿಡಿಪಿಐ ಡಾ. ಎ ಬಿ ಪುಂಡಲೀಕ್ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವಾಂಗ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಚವಲಗಿ ಅಮಾನತುಗೊಂಡ ಶಿಕ್ಷಕ. ಗ್ರಾಮದಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಣೆ ವೇಳೆ ನರ್ಸ್ ಪರಿಚಯ ಮಾಡಿಕೊಂಡಿದ್ದ ಶಿಕ್ಷಕ ಸುರೇಶ್ ಚವಲಗಿ ನಂತರ ಅಶ್ಲೀಲ ಸಂದೇಶ ಕಳುಹಿಸಿ ಕಿರಿಕಿರಿ ಮಾಡುತ್ತಿದ್ದನಂತೆ.
ಶಿಕ್ಷಕನ ವರ್ತನೆಗೆ ಬೇಸತ್ತ ನರ್ಸ್ ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕನಿಗೆ ಚಪ್ಪಲಿ ಏಟು ನೀಡಿದ್ದರು. ಇದಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದರು. ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು.
ಇದನ್ನೂ ಓದಿ: ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕನಿಗೆ ಥಳಿತ.. ಚಪ್ಪಲಿ ಹಿಡಿದು ಗೂಸಾ ಕೊಟ್ಟ ನರ್ಸ್..!
ಶಿಕ್ಷಕನಿಗೆ ಧರ್ಮದೇಟು ನೀಡಿದ ನರ್ಸ್ ಸ್ಥಳೀಯರ ಜತೆಗೆ ಕಿತ್ತೂರು ಬಿಇಒ ಕಚೇರಿಗೆ ತೆರಳಿ ಲಿಖಿತ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಬಿಇಒ ಇಲಾಖೆ ಅಸಭ್ಯ ವರ್ತನೆ ತೋರಿದ ಶಿಕ್ಷಕನನ್ನು ಅಮಾನತು ಮಾಡುವಂತೆ ಡಿಡಿಪಿಐಗೆ ಶಿಫಾರಸು ಮಾಡಿದ್ದರು.
ಮುಖ್ಯ ಶಿಕ್ಷಕ ಸುರೇಶ್ ಚವಲಗಿ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದು, ಅದೇ ಶಾಲೆಯ ಸಹ ಶಿಕ್ಷಕನಿಗೆ ಪ್ರಭಾರಿಯಾಗಿ ನೇಮಿಸಲಾಗಿದೆ.