ಬೆಳಗಾವಿ: ರಾಜ್ಯದಲ್ಲಿ ಅಶಾಂತಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿ ಗೂಂಡಾ ವರ್ತನೆ ಮಾಡುವ ಜನರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಅನಗೊಳದ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮರು ಪ್ರತಿಷ್ಠಾಪನೆ ಮಾಡಿದ್ದ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಅವರೇ ನಿಮ್ಮ ರಾಜಕೀಯ ನಿಮ್ಮ ರಾಜ್ಯದಲ್ಲಿ ಇಟ್ಕೊಳ್ಳಿ. ಇಲ್ಲಿ ಮೂಗು ತೂರಿಸಲು ಬರಬೇಡಿ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗುಡುಗಿದರು.
ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಹೆಚ್ಡಿಕೆ
ಬೆಳಗಾವಿ ನಾಯಕರು ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರು ನಮ್ಮ ಜನರ ಬಗ್ಗೆ ಮಾತನಾಡಬೇಕು. ಇವರು ಮಹಾರಾಷ್ಟ್ರದ ಪ್ರತಿನಿಧಿಗಳಲ್ಲ. ಕೇವಲ ಚುನಾವಣೆ ರಾಜಕೀಯವಾಗಿ ಮಾಡದೇ ಜನರನ್ನು ಕಾಪಾಡುವ ಕೆಲಸ ಮಾಡಬೇಕು. ಎಂಇಎಸ್ ಇರಲಿ, ಯಾರೇ ಇರಲಿ ನೀವು ಕನ್ನಡದ ನೆಲದಲ್ಲಿ ಇದ್ದೀರಿ. ಇಲ್ಲಿಯ ನೆಲ ಜಲಕ್ಕೆ ತಕ್ಕಂತೆ ಇರಬೇಕು ಎಂದು ರಾಯಣ್ಣ ಮೂರ್ತಿ ವಿರೂಪವಾದರೂ ಮಾತನಾಡದ ಜಿಲ್ಲೆಯ ಜನಪ್ರತಿನಿಧಿಗಳನ್ನು ಹೆಚ್ಡಿಕೆ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಬಹುಮತ ಇದೆ ಎಂದು ದಬ್ಬಾಳಿಕೆ ಮಾಡಬೇಡಿ.. ಮತಾಂತರ ನಿಷೇಧ ಮಸೂದೆ ಮಂಡನೆಗೆ ಹೆಚ್ಡಿಕೆ ಕಿಡಿ..
ಯಾರೋ ತಿಳಿಗೇಡಿಗಳು ಮಧ್ಯರಾತ್ರಿಯಲ್ಲಿ ರಾಯಣ್ಣ ಪ್ರತಿಮೆಗೆ ಧಕ್ಕೆ ಉಂಟುಮಾಡುವ ಕೆಲಸವನ್ನು ಮಾಡಿದ್ದಾರೆ. ನಾನು ಬೆಳಗಾವಿಯಲ್ಲಿ 2006ರಲ್ಲಿ ಅಧಿವೇಶನ ನಡೆಸುವ ಸಂದರ್ಭದಲ್ಲೂ ಕೆಲವು ಸಂಘಟನೆಗಳು ವಿರೋಧಿಸಿದ್ದವು. ಮಹಾರಾಷ್ಟ್ರದವರು ಬೆಳಗಾವಿ ನಮ್ಮದು ಅಂತಾ ಕೇಂದ್ರ ಸರ್ಕಾರಕ್ಕೆ ನಿಯೋಗ ತರಲು ಯತ್ನಸಿದ್ದಾಗಲೇ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವ ಆಲೋಚನೆ ಹುಟ್ಟಿಕೊಂಡಿದ್ದು. ರಾಜ್ಯದಲ್ಲಿ ಕೆಲವೇ ಕೆಲವೂ ತಿಳಿಗೇಡಿಗಳು ರಾಜ್ಯದ ಸೌಹಾರ್ದ ಹಾಳು ಮಾಡಲು ಹೊರಟಿದ್ದಾರೆ. ಅವರ ಕೃತ್ಯಕ್ಕೆ ಯಾರೂ ಬಲಿಯಾಗದೇ ರಾಜ್ಯದಲ್ಲಿ ಅಣ್ಣತಮ್ಮಂದರ ಹಾಗೆ ಬಾಳಬೇಕು ಎಂದರು.
ಗಡಿಪಾರು ಮಾಡಬೇಕು..
ಇಂತಹ ಘಟನೆಗಳಿಗೆ ಕಾರಣರಾದ ಜನರಿಗೆ ನಿನ್ನೆ ವಿಧಾನಸಭೆಯಲ್ಲಿ ದೇಶದ್ರೋಹಿ ಮತ್ತು ರಾಜ್ಯದ್ರೋಹದ ತೀರ್ಮಾನ ಮಾಡ್ತೇವಿ ಅಂತಾ ಹೇಳ್ತಿದ್ದಾರೆ. ಆದ್ರೆ, ನನ್ನ ಅಭಿಪ್ರಾಯದಲ್ಲಿ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ನಮ್ಮ ರಾಜ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರನ್ನು ಗಡಿಪಾರು ಮಾಡಬೇಕು. ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ಮಾಡುವುದನ್ನು ನೋಡಿದ್ರೆ ಕಾನೂನಿನ ವ್ಯವಸ್ಥೆ ಬಗ್ಗೆ ಪ್ರಶ್ನೆ ಹುಟ್ಟುತ್ತದೆ. ಇಂತಹ ಘಟನೆಗೆ ಕಾರಣರಾದವರು ಯಾರೇ ಇದ್ದರೂ ಅವರನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಡಿಕೆ ಆಗ್ರಹಿಸಿದರು.
ಬೆಳಗಾವಿ ನಗರ ಬೆಂಗಳೂರು ನಗರಕ್ಕೆ ಆರ್ಥಿಕವಾಗಿ ಪೈಪೋಟಿ ನೀಡುವ ಒಂದು ನಗರವಾಗಿದೆ. ಇದಕ್ಕೆ ಸರಿಯಾಗಿ ಮೂಲ ಸೌಕರ್ಯಗಳನ್ನು ಕೊಟ್ಟು ಉದ್ಯೋಗಳನ್ನು ಸೃಷ್ಟಿಸಿ ಅಭಿವೃದ್ಧಿ ಪಡಿಸಬೇಕು. ಒಳ್ಳೆಯ ಕೈಗಾರಿಕೆಗಳನ್ನು ಸ್ಥಾಪಿಸಿ ಪ್ರತಿ ಕುಟುಂಬಕ್ಕೆ ದುಡಿಯಲು ಅವಕಾಶ ಕೊಡಬೇಕು. ಎಂಇಎಸ್ ಸಂಘಟನೆಗೆ ತಿಳಿಹೇಳಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.
ಮತಾಂತರ ಕಾಯ್ದೆ ಜಾರಿಗೆ ತರುವುದಕ್ಕೆ ನಮ್ಮ ವಿರೋಧ ಇದೆ. ಈಗಾಗಲೇ ಈ ಕುರಿತು ಸ್ಪಷ್ಟನೆ ನೀಡಿದ್ದೇನೆ. ವಿಧಾನ ಪರಿಷತ್ ಚುನಾವಣೆ ವೇಳೆ ನಾವು ಯಾರ ಜೊತೆನೂ ಒಪ್ಪಂದ ಮಾಡಿಕೊಂಡಿಲ್ಲ. ಕಾಂಗ್ರೆಸ್ಬಿ-ಜೆಪಿ ಒಪ್ಪಂದ ಮಾಡಿಕೊಂಡಿದೆ ಎಂದರು.