ಅಥಣಿ (ಬೆಳಗಾವಿ): ರಾಜ್ಯದಲ್ಲಿ ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿದ್ದರೂ ರಾಜ್ಯ ಸರ್ಕಾರವು ಅದನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವೇ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ -19 ನಿಯಂತ್ರಣಕ್ಕಾಗಿ ಆರೋಗ್ಯ ಹಸ್ತ ಯೋಜನೆಯನ್ನು ಆಗಸ್ಟ್ 17ರಿಂದ ತಾಲೂಕಿನಾದ್ಯಂತ ಆರಂಭಿಸಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದ್ದಾರೆ.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಆರೋಗ್ಯ ಹಸ್ತ ಯೋಜನೆಗೆ 2 ಲಕ್ಷ ರೂ. ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು, ಅಥಣಿ-ಮತಕ್ಷೇತ್ರದ ಜನತೆಗೆ ನಾನು ಯಾವತ್ತೂ ಚಿರರುಣಿಯಾಗಿದ್ದೇನೆ. ಕೊರೊನಾ ನಿಯಂತ್ರಣಕ್ಕಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ-ಮನೆ ಆರೋಗ್ಯ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು.
ಈ ದಿಸೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಹಾಗೂ ಪ್ರತಿ ವಾರ್ಡ್ಗೆ ಇಬ್ಬರು ಕೊರೊನಾ ವಾರಿಯರ್ಸ್ಗಳನ್ನು ನೇಮಕ ಮಾಡಲಾಗುತ್ತದೆ. 40 ವರ್ಷದೊಳಗಿನ ವಯೋಮಾನದವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪಟ್ಟಣದ ಎಲ್ಲ ವಾರ್ಡಗಳಲ್ಲಿ ಕೊರೊನಾ ವಾರಿಯರ್ಸ್ ಪಡೆ ರಚನೆಯಾಗಲಿದೆ ಎಂದರು.
ಈ ಕೊರೊನಾ ವಾರಿಯರ್ಸ್ಗಳು ಪ್ರತಿ ಮನೆ-ಮನೆಗೆ ತೆರಳಿ ಸ್ಕ್ರೀನಿಂಗ್ ಮಾಡಿ, ಜನರ ಆರೋಗ್ಯದ ಸ್ಥಿತಿಗತಿಯನ್ನು ನೈಜವಾಗಿ ದಾಖಲಿಸುತ್ತಾರೆ. ಪರೀಕ್ಷೆಯ ವೇಳೆ ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷವು ಕೊರೊನಾ ವಾರಿಯರ್ಸ್ಗಳು ಜನತೆ ಮತ್ತು ಆಸ್ಪತ್ರೆಯ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದ್ದು, ಅವರಿಗೆ ತಲಾ ಎರಡು ಲಕ್ಷ ರೂ. ವಿಮೆ ಮಾಡಿಸಲಾಗುತ್ತಿದೆ.
ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುರಕ್ಷಾ ಸಾಮಗ್ರಿಗಳು ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ಒಳಗೊಂಡ ಒಂದು ಕಿಟ್ ಸಹ ಕೊಡಲಾಗುವುದು. ಇದು ಕೋವಿಡ್ ನಿಯಂತ್ರಣಕ್ಕಾಗಿ ಕಾಂಗ್ರೆಸ್ನಿಂದ ಒಂದು ಸಣ್ಣ ಪ್ರಾಮಾಣಿಕ ಪ್ರಯತ್ನ. ಮನೆ-ಮನೆ ಸಮೀಕ್ಷೆ ವೇಳೆ ಪ್ರತಿಯೊಬ್ಬರ ಹೆಸರು, ವಿಳಾಸ ಹಾಗೂ ಅವರ ಆರೋಗ್ಯ ಸಮಸ್ಯೆ ಕುರಿತು ರಿಜಿಸ್ಟರ್ ಪುಸ್ತಕದಲ್ಲಿ ದಾಖಲಿಸಲಾಗುವುದು ಎಂದರು.