ಚಿಕ್ಕೋಡಿ : ಸತೀಶ್ ಜಾರಕಿಹೊಳಿ ಇಬ್ಬರು ಆಪ್ತರ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಮಾಹಿತಿ ನೀಡಿದ ಅವರು, ಗ್ರಾಮದ ಬಸದಿ ಬಳಿ ಕಿರಣ್ ರಜಪೂತ ಹಾಗೂ ಭರಮಾ ದೂಪದಾಲೆ ಎಂಬುವರು ಸ್ನೇಹಿತರ ಜೊತೆ ಕುಳಿತಿದ್ದಾಗ ಅಪರಿಚಿತ ವ್ಯಕ್ತಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದ.
ಆದ್ರೆ, ಫೈರಿಂಗ್ ಸರಿಯಾಗಿ ಆಗದ ಹಿನ್ನೆಲೆ ಭರಮಾ ದೂಪದಾಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫೈರಿಂಗ್ ಮಾಡಿದ ವ್ಯಕ್ತಿ ಗುರುತು ಅವರಿಗೂ ಕೂಡಾ ಗೊತ್ತಿಲ್ಲ. ಘಟನೆ ರಾತ್ರಿ ಹೊತ್ತು ನಡೆದಿದ್ದು, ದೀಪದ ಬೆಳಕು ಇರಲಿಲ್ಲ. ಇದರಿಂದ ಆಗಂತುಕ ಯಾರು ಎಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಓದಿ-ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಕಳ್ಳರ ಹಾವಳಿ: ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಮನವಿ
ಆರೋಪಿ ಪತ್ತೆಗಾಗಿ ಗೋಕಾಕ್ ಡಿವೈಎಸ್ಪಿ ಹಾಗೂ ಹುಕ್ಕೇರಿ ಸಿಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗೆ ಆರೋಪಿಯನ್ನು ಪತ್ತೆ ಹಚ್ಚಲಾಗುವುದು. ಮೇಲ್ನೋಟಕ್ಕೆ ಆಸ್ತಿ ವಿಚಾರವಾಗಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ ಎಂದರು.
ಈ ಹಿಂದೆ ಕಿತ್ತೂರಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಗಳು ಸಿಕ್ಕಾಗ ಅವರಿಗೆ ಕೊಲೆ ಸುಪಾರಿ ಕೊಟ್ಟಿದ್ದು ತಿಳಿದು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದ ವಕೀಲರೊಬ್ಬರ ಮೇಲೆ ದೂರು ದಾಖಲಾಗಿತ್ತು. ಆದರೆ, ಅವರು ಕೋವಿಡ್ನಿಂದ ಸಾವನ್ನಪ್ಪಿದ್ದರು. ಸದ್ಯ ತನಿಖೆಯ ನಂತರ ಪ್ರಕರಣದ ನಿಖರವಾದ ಮಾಹಿತಿ ನೀಡಬಹುದು ಎಂದರು.
ಪ್ರಕರಣ ಯಮಕಣಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.