ಬೆಳಗಾವಿ: ಒಂದು ಎಕರೆಗೆ 1ಲಕ್ಷ ರೂ. ಪರಿಹಾರ ನೀಡಬೇಕೆಂದು ಅನೇಕರು ಕೇಳುತ್ತಿದ್ದಾರೆ. ಹಾಗಾದರೆ ನಾನೂ ಒಬ್ಬ ನಿರಾಶ್ರಿತ, ನನಗೂ ಪರಿಹಾರ ನೀಡಬೇಕು ಎಂದು ಹೇಳಿಕೆ ನೀಡಿದ್ದ ಡಿಸಿಎಂ ಲಕ್ಷ್ಮಣ ಸವದಿಗೆ ರೈತರು 180 ರೂ. ಪರಿಹಾರ ನೀಡಿದ ಘಟನೆ ನಡೆದಿದೆ.
ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ಪರಿಶೀಲನಾ ಸಭೆಯಲ್ಲಿ ನಾನೂ ಒಬ್ಬ ನಿರಾಶ್ರಿತ ಎಂದಿದ್ದ ಲಕ್ಷ್ಮಣ ಸವದಿ ಹೇಳಿಕೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಬೆಳಗಾವಿಯ ರೈತ ಸಂಘದ ಸದಸ್ಯರು ಒಟ್ಟು ಗೂಡಿಸಿ 180 ರೂ. ಹಣವನ್ನು ಲಕ್ಷ್ಮಣ ಸವದಿಗೆ ಪರಿಹಾರ ರೂಪದಲ್ಲಿ ಕೊಡುವಂತೆ ಜಿಲ್ಲಾಧಿಕಾರಿಗೆ ನೀಡಿದ್ದಾರೆ.
ರೈತರಿಗೆ ಸರ್ಕಾರ ಸಮರ್ಪಕ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ನಿನ್ನೆಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.