ಅಥಣಿ: ನನಗೆ ವೈರಿಗಳು ಹೆಚ್ಚಾಗಿದ್ದಾರೆ. ಇದರಿಂದ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಜೊತೆ ನಡೆದ ಸಭೆಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಮತ್ತು ಎರಡನೇ ಪ್ರಾಶಸ್ತ್ಯದ ಮತ ಯಾರಿಗೆ ಹಾಕಬೇಕು ಎಂಬುದನ್ನು ಯಾರಿಗೆ ಹಾಕಬೇಕು ಎಂಬುದನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿ ಶೀಘ್ರವೇ ತಿಳಿಸುವೆ ಎಂದು ಹೇಳಿದರು.
ಮೊದಲ ಮತ ಲಖನ್ಗೋ? ಕವಟಗಿಮಠಗೋ?
ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದು ನನ್ನ ಗುರಿಯಾಗಿದೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹಾಗೂ ಲಖನ್ ಜಾರಕಿಹೊಳಿ ಅವರು ಗೆಲ್ಲಬೇಕು. ಇದರಲ್ಲಿ ಯಾರಿಗೆ ಮೊದಲು ಪ್ರಾಶಸ್ತ್ಯದ ಮತ ನೀಡಬೇಕು ಎಂದು ತಿಳಿಸುತ್ತೇನೆ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಜೀವನ ಚರಿತ್ರೆ ಡಿ.13 ರಂದು ಬಿಡುಗಡೆ
ವಿವೇಕ್ ರಾವ್ ಪಾಟೀಲ್ರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಅನಿವಾರ್ಯವಾಗಿ ಸಹೋದರ ಲಖನ್ ಜಾರಕಿಹೊಳಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ವಿವೇಕ್ ರಾವ್ ಅವರಿಗೆ ನ್ಯಾಯ ಒದಗಿಸಲು ಲಖನ್ ಸ್ಪರ್ಧೆ ಮಾಡಿದ್ದಾರೆ. ಅಥಣಿ, ಕಾಗವಾಡ, ಕುಡಚಿ ಜನರು ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ನಮಗೆ ಅನ್ಯಾಯ ಆಗುತ್ತಿದ್ದಂತೆ ನಾವು ಹೊರಗೆ ಬಂದೆವು. ಜೆಡಿಎಸ್ ಮತ್ತು ಕಾಂಗ್ರೆಸ್ನ ಸಮ್ಮಿಶ್ರ ಸರ್ಕಾರ ಪತನವಾಗುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣ ಎಂದು ಮತ್ತೆ ಡಿಕೆಶಿ ವಿರುದ್ಧ ವಾಗ್ದಾಳಿ ಮುಂದುವರಿಸಿದರು.