ಬೆಳಗಾವಿ: ಕೋವಿಶೀಲ್ಡ್ ಲಸಿಕೆ ಈಗಾಗಲೇ ಗಡಿ ಜಿಲ್ಲೆಗೆ ಆಗಮಿಸಿದ್ದು, ಇಲ್ಲಿನ ವ್ಯಾಕ್ಸಿನ್ ಡಿಪೋದಲ್ಲಿ ಲಸಿಕೆ ಸಂಗ್ರಹಿಸಲಾಗಿದೆ.
ಜನವರಿ 16ರಂದು ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್, ಖಾನಾಪುರ, ರಾಯಬಾಗ, ರಾಮದುರ್ಗ, ಸವದತ್ತಿ, ಹುಕ್ಕೇರಿ, ಕೊಣ್ಣೂರು, ವಂಟಮೂರಿ ಕಾಲನಿ ಆರೋಗ್ಯ ಕೇಂದ್ರ ಮತ್ತು ಬೆಳಗಾವಿಯ ಬಿಮ್ಸ್ ಜಿಲ್ಲಾಸ್ಪತ್ರೆ ಸೇರಿ ಜಿಲ್ಲೆಯ 12 ಕಡೆ ಲಸಿಕೆ ಹಾಕಲಾಗುತ್ತದೆ.
ಆರಂಭಿಕ ಹಂತದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಾದ ಬಳಿಕವೇ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಸರ್ಕಾರಿ ಹಾಗೂ ಸರ್ಕಾರೇತ್ತರ ಸಿಬ್ಬಂದಿಗೆ ಲಸಿಕೆ ಸಿಗಲಿದೆ.
ಬೆಳಗಾವಿ ಘಟಕದಿಂದ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಆಗಲಿದೆ ಎಂದು ಡಿಎಚ್ಒ ಡಾ.ಶಶಿಕಾಂತ ಮುನ್ಯಾಳ ಮಾಹಿತಿ ನೀಡಿದ್ದಾರೆ.