ಬೆಳಗಾವಿ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕುಂದಾನಗರಿಗೆ ಭೇಟಿ ನೀಡಿದಾರೆ. ಕೋವಿಡ್ ನಿಯಮಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಧಿಕಾರಿಯನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶಿಸಿತ್ತು.
ಸರ್ಕಾರದ ಆದೇಶದ ಮೇರೆಗೆ ಇಂದು ಬೆಳಗಾವಿ ನಗರಕ್ಕೆ ಮೊದಲ ಬಾರಿ ಆಗಮಿಸಿರುವ ಎಡಿಜಿಪಿ ಭಾಸ್ಕರ್ ರಾವ್, ನಗರದ ರಾಣಿಚನ್ನಮ್ಮ ಸರ್ಕಲ್, ಕಾಕತಿವ್ಹೇಸ್, ಶನಿವಾರಕೂಟ, ಖಡೇಬಜಾರ್, ಗಣಪತಿಗಲ್ಲಿ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊರೊನಾ ಜಾಗೃತಿ ಮೂಡಿಸಿದರು. ಇದೇ ವೇಳೆ ಬೀದಿ ಬದಿಯ ತರಕಾರಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಜನರಿಗೆ ತೊಂದರೆ ಆಗದಂತೆ ಜೀವನೂ ಇರಬೇಕು, ಜೀವನವೂ ಇರಬೇಕು ಎಂಬ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಲಾಠಿ ಏಟು ಬಿಟ್ಟು, ದಾನಿಗಳಿಂದ ಮಾಸ್ಕ್ ಪಡೆದುಕೊಂಡು ಮಾಸ್ಕ್ ವಿತರಿಸಲಾಗುತ್ತಿದೆ.
ಅನುಕೂಲಸ್ಥರು ಮೊದಲು ಮಾಸ್ಕ್ ಹಾಕಿಕೊಳ್ಳಬೇಕು. ನಂತರ ಬೇರೆಯವರಿಗೂ ಮಾಸ್ಕ್ ಹಂಚುವ ಕೆಲಸ ಮಾಡಬೇಕೆಂದು ಮನವಿ ಮಾಡಿಕೊಂಡರು. ಈ ವೇಳೆ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೆ ಲೋಕಾಯುಕ್ತ ಡಿಸಿಪಿ ಯಶೋಧಾ ವಂಟಗೋಡಿ, ಕೆಎಸ್ಆರ್ಪಿ ಕಮಾಂಡೆಂಟ್ ಹಂಝಾ ಹುಸೇನ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದರು.