ಬೆಳಗಾವಿ: ಸುಪ್ರಸಿದ್ಧ ಸವದತ್ತಿ ರೇಣುಕಾದೇವಿ ದರ್ಶನ ಮಾಡಿಸಲು ವ್ಯಕ್ತಿಯೊಬ್ಬ 200 ರೂ. ಲಂಚ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸರ ಎದುರೇ ಹಗಲು ದರೋಡೆ ನಡೆಯುತ್ತಿದ್ದರೂ ಖಾಕಿ ಮಾತ್ರ ಜಾಣಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಜಿಲ್ಲೆ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೊರೊನಾ ಹಿನ್ನೆಲೆ ಅಕ್ಟೋಬರ್ 31ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇಂದಿನಿಂದ ಅ.25 ರವರೆಗೆ ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿದೆ. ಕೊರೊನಾ ಮಾರ್ಗಸೂಚಿ ಅನ್ವಯ ಸರಳ ನವರಾತ್ರಿ ಉತ್ಸವಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.
ಅಧಿಕಾರಿಗಳು, ಅರ್ಚಕರು, ಕೆಲವೇ ಗಣ್ಯರ ಸಮ್ಮುಖದಲ್ಲಿ ಸರಳ ನವರಾತ್ರಿ ಉತ್ಸವ ನಡೆಸಲಾಗುತ್ತಿದೆ. ಭಕ್ತರು ಬಾರದಂತೆ ಯಲ್ಲಮ್ಮನಗುಡ್ಡಕ್ಕೆ ಸಂಪರ್ಕಿಸುವ ಉಗರಗೋಳ, ಸವದತ್ತಿ, ಜೋಗುಳಬಾವಿ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ.
ಹೀಗಿದ್ದರೂ ವ್ಯಕ್ತಿಯೋರ್ವ ಪೊಲೀಸರ ಸಮ್ಮುಖದಲ್ಲೇ ಭಕ್ತರ ಬಳಿ 200 ರೂ. ಲಂಚ ಪಡೆದು ದೇವರ ದರ್ಶನಕ್ಕೆ ಕಳುಹಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಲಂಚ ಪಡೆಯುವ ವ್ಯಕ್ತಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡುತ್ತಿದ್ದಾರಾ ಎಂಬ ಅನುಮಾನಗಳು ಮೂಡಿವೆ.