ಅಥಣಿ: ಪ್ರತಿಷ್ಠಿತ ಬೆಳಗಾವಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನ. 14ರಂದು ನಡೆಯಲಿದ್ದು, ಗದ್ದುಗೆಗಾಗಿ ನಿರ್ದೇಶಕರ ಮಧ್ಯೆ ಕಸರತ್ತು ತೀವ್ರಗೊಂಡಿವೆ.
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಉಮೇಶ್ ಕತ್ತಿ ಮತ್ತು ರಮೇಶ್ ಕತ್ತಿ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಇನ್ನಿತರರು ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿಲ್ಲಾ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ಅಧ್ಯಕ್ಷ ಸ್ಥಾನದ ಮೇಲೆ ಈ ಸಲವೂ ರಮೇಶ್ ಕತ್ತಿ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕೆ ಸಹೋದರ ಉಮೇಶ್ ಕತ್ತಿ ಮೇಲೆ ಒತ್ತಡ ಹೇರುತ್ತಿರುವ ರಮೇಶ್ ಕತ್ತಿ ಹುದ್ದೆಯಲ್ಲಿ ಮುಂದುವರೆಯಲು ಕಸರತ್ತು ಆರಂಭಿಸಿದ್ದಾರೆ. ಅಲ್ಲದೆ ಇಂದು ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕ್ನ ಹಲವು ನಿರ್ದೇಶಕರು ಭಾಗಿಯಾಗಿದ್ದರು. ರಮೇಶ್ ಕತ್ತಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಕೂಡ ಸಭೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಇತ್ತ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಆಪ್ತ ಮಹಾಂತೇಶ ದೊಡ್ಡನಗೌಡರ ಅವರನ್ನು ಅಧ್ಯಕ್ಷ ಹುದ್ದೆಗೇರಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಎಲ್ಲಾ ನಾಯಕರು ಸಭೆ ನಡೆಸಿದ್ದರೂ ಗದ್ದುಗೆಗೆ ತಂತ್ರ-ಪ್ರತಿತಂತ್ರ ಮುಂದುವರೆಸಿದ್ದಾರೆ. 16 ನಿರ್ದೇಶಕ ಸ್ಥಾನ ಹೊಂದಿರುವ ಡಿಸಿಸಿ ಬ್ಯಾಂಕ್ಗೆ 13 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿಗಿತ್ತು. ಉಳಿದ ಮೂರು ಸ್ಥಾನಗಳಿಗೆ ನವೆಂಬರ್ 6ರಂದು ಚುನಾವಣೆ ನಡೆದಿತ್ತು. ಅದರಲ್ಲಿ ಕಮಲ ನಾಯಕರ ಬಣದ ಇಬ್ಬರು ಗೆಲುವು ದಾಖಲಿಸಿದ್ದಾರೆ.