ಬೆಳಗಾವಿ: ಗಡಿಯಲ್ಲಿ ಕೋವಿಡ್ ಹೆಚ್ಚಳವಾದ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಜಿಲ್ಲೆಗೆ ಆಗಮಿಸುವವರ ಮೇಲೆ ಹದ್ದಿನ ಕಣ್ಣಿಡಲು ನಿರ್ಧರಿಸಲಾಗಿದೆ. ಈ ಕುರಿತು ನಗರದಲ್ಲಿಂದು ಕೋವಿಡ್ ನಿರ್ವಹಣೆ ಸೇರಿದಂತೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬಳಿಕ ಎಡಿಜಿಪಿ ಉಮೇಶ್ ಕುಮಾರ್ ಮಾತನಾಡಿದ್ದಾರೆ.
ಕೋವಿಡ್ ನಿರ್ವಹಣೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮಹಾರಾಷ್ಟ್ರದಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಜೊತೆಗೆ ಎರಡೂ ಡೋಸ್ ಲಸಿಕೆ ಪಡೆದಿರಬೇಕು. ಅದಕ್ಕಾಗಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಗಡಿಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ರಾಜ್ಯ ಸರ್ಕಾರ ಕೂಡ ಕೋವಿಡ್ ನಿರ್ವಹಣೆಗೆ ಅಗತ್ಯ ಸಹಕಾರ ನೀಡುತ್ತಿದೆ. ಹೀಗಾಗಿ ಸಾರ್ವಜನಿಕರು ಕೂಡ ಸರ್ಕಾರಕ್ಕೆ ಸಹಕರಿಸಬೇಕು. ಎಲ್ಲರೂ ಕಡ್ಡಾಯ ಕೊರೊನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಬಳಿಕ ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಗಡಿಭಾಗ ಸುಮಾರು 175 ಕಿ.ಮೀ.ನಷ್ಟು ವಿಶಾಲವಾಗಿ ಚಾಚಿಕೊಂಡಿದೆ. 75 ಗ್ರಾಮಗಳು ಗಡಿ ಪ್ರದೇಶದಲ್ಲಿವೆ. 22 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂದೋಬಸ್ತ್ ಉಸ್ತುವಾರಿ ನಡೆಯುತ್ತಿದೆ. ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲದೇ ಹೋಂ ಗಾರ್ಡ್‍ಗಳನ್ನು ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜೊತೆಗೆ ಜಿಲ್ಲೆಯ ಪ್ರವಾಸಿ ತಾಣಗಳಾದ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಸ್ಥಾನ, ಗೋಕಾಕ್ ಫಾಲ್ಸ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು. ಸಭೆಯಲ್ಲಿ ಐಜಿಪಿ ಸತೀಶ್ಕುಮಾರ್, ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಹೆಚ್, ಡಿಸಿಪಿ ಸ್ನೇಹಾ, ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ, ಎಸಿಪಿ, ಡಿಎಸ್‍ಪಿಗಳು ಭಾಗಿಯಾಗಿದ್ದರು.
ಓದಿ: ಮಹಾರಾಷ್ಟ್ರ,ಕೇರಳದಿಂದ ಬರುವವರಿಗೆ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ